ಕುಣಿಗಲ್: ದಲಿತರು ದೇವಾಲಯ ಪ್ರವೇಶಿಸಿ ಪೂಜೆ ಸಲ್ಲಿಸಲು ಮುಂದಾದಾಗ ಇದು ಖಾಸಗಿ ದೇವಾಲಯ ಎಂದು ದೇವಸ್ಥಾನ ಪ್ರವೇಶಕ್ಕೆ ಅಡ್ಡಿಪಡಿಸಿದ್ದಲ್ಲದೆ ಪೂಜೆಗೂ ನಿರಾಕರಿಸಿರುವ ಘಟನೆ ಕಿಚ್ಚಾವಾಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ತಾಲೂಕಿನ ಹುಲಿಯೂರುದುರ್ಗ ಹೋಬಳಿ ಕಿಚ್ಚವಾಡಿ ಗ್ರಾಮದಲ್ಲಿ ಒಕ್ಕಲಿಗರು, ಆಚಾರ್, ಮಡಿವಾಳರು, ಲಿಂಗಾಯಿತರು, ವೈಷ್ಣವರು ಮತ್ತು ಪರಿಶಿಷ್ಟ ಜಾತಿ ಜನಾಂಗದವರು ವಾಸವಾಗಿದ್ದಾರೆ. ಗ್ರಾಮದಲ್ಲಿ ಚನ್ನಕೇಶವ, ಬಸವೇಶ್ವರ, ಲಕ್ಷ್ಮಿದೇವಿ, ಹುಚ್ಚಮ್ಮ ದೇವಿ, ಮಹಾದೇವಿ, ಮಾಸ್ತಮ್ಮ ದೇವಿ, ಕೋಣೆ ಚಿಕ್ಕಮ್ಮ ದೇವಿ ದೇವಸ್ಥಾನಗಳಿವೆ. ಅದರಲ್ಲಿ ಕೋಣೆ ಚಿಕ್ಕಮ್ಮ ದೇವಿ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ನಿರಾಕರಿಸಲಾಗಿತ್ತು.
ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಗೋಪಿ ಜಯಪ್ರಕಾಶ್ ಎಂಬುವರು ಜುಲೈ 29ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯಲ್ಲಿ ದೇವಾಲಯ ಪ್ರವೇಶ ಕಲ್ಪಿಸುವಂತೆ ಮನವಿ ಸಲ್ಲಿಸಿದ್ದರು.
ಸೋಮವಾರ ಡಿವೈಎಸ್ ಪಿ ಓಂ ಪ್ರಕಾಶ್, ತಹಶೀಲ್ದಾರ್ ರಶ್ಮಿ, ಪಿಎಸ್ ಐ ಪ್ರಶಾಂತ್ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗ್ಗೆ ಗ್ರಾಮದ ಮುಖಂಡರೊಂದಿಗೆ ಚರ್ಚಿಸಿದರು. ದೇವಸ್ಥಾನಕ್ಕೆ ಎಲ್ಲರಿಗೂ ಮುಕ್ತ ಪ್ರವೇಶಕ್ಕೆ ಅವಕಾಶವಿರಬೇಕು. ದೇವಸ್ಥಾನ ಪ್ರವೇಶಕ್ಕೆ ಯಾರಿಗೂ ಅಡ್ಡಿಪಡಿಸಬಾರದು ಎಂದರು.
ಗ್ರಾಮದ ಮುಖಂಡ ರಾಜಣ್ಣ ಮಾತನಾಡಿ, ‘ಕೋಣೆ ಚಿಕ್ಕಮ್ಮ ದೇವಿ ದೇವಸ್ಥಾನ ನಮಗಾಗಿ ಕಟ್ಟಿಕೊಂಡಿದ್ದೇವೆ. ನಮ್ಮ ಅಣ್ಣ ತಮ್ಮಂದಿರಿಗೆ ಸೇರಿದ ದೇವಸ್ಥಾನವಿದು. ಯಾರನ್ನು ಪ್ರವೇಶ ಮಾಡಲು ಬಿಡುವುದಿಲ್ಲ. ಬೇಕಾದರೆ ದೇವಸ್ಥಾನ ಕಿತ್ತುಕೊಂಡು ಹೋಗಿ, ಇಲ್ಲದಿದ್ದರೆ ಪರಿಶಿಷ್ಟ ಜಾತಿ ಜನಾಂಗದವರಿಗೆ ಕೀ ಕೊಟ್ಟುಬಿಡುತ್ತೇನೆ, ಅವರೇ ಪೂಜೆ ಮಾಡಿಕೊಳ್ಳಲಿ’ ಎಂದು ದೇವಸ್ಥಾನ ಪ್ರವೇಶಕ್ಕೆ ನಿರಾಕರಿಸಿದರು ಎಂದು ವರದಿಯಾಗಿದೆ.
ಗ್ರಾಮದಲ್ಲಿ ಸಾರ್ವಜನಿಕವಾಗಿ ದೇವಸ್ಥಾನ ನಿರ್ಮಾಣ ಮಾಡಿ ಅದ್ದೂರಿಯಾಗಿ ಹಬ್ಬ ಆಚರಿಸುತ್ತಿರುವಾಗ ದೇವಸ್ಥಾನ ಪ್ರವೇಶ ನಿರಾಕರಿಸುವಂತಿಲ್ಲ. ದೇವಸ್ಥಾನ ಪ್ರವೇಶಕ್ಕೆ ಸರ್ವರಿಗೂ ಸಮಾನವಾದ ಅವಕಾಶ ಮಾಡಿಕೊಡಬೇಕು. ಕೂಡಲೇ ದೇವಸ್ಥಾನ ಪ್ರವೇಶಕ್ಕೆ ಅಡ್ಡಿಪಡಿಸಿದ್ದವರ ವಿರುದ್ಧ ಕ್ರಮ ಕೈಗೊಂಡು ದಲಿತರಿಗೆ ದೇವಸ್ಥಾನ ಪ್ರವೇಶ ಕಲ್ಪಿಸಬೇಕೆಂದು ದಲಿತ ಸಂಘಟನೆ ಒತ್ತಾಯಿಸಿವೆ. ದಲಿತ ಮುಖಂಡ ಬಿ.ಜಿ ಗಂಗಾಧರ್, ರಾಜು ವೆಂಕಟಪ್ಪ, ಕಂದಾಯ ನಿರೀಕ್ಷಕ ಪುರುಷೋತ್ತಮ್, ಗ್ರಾಮಸ್ಥರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC