ಭಾರತದ ಮಾಟಗಾರರ ರಾಜಧಾನಿ ಎಂದೇ ಅಪಖ್ಯಾತಿ ಪಡೆದಿರುವ ಈ ಗ್ರಾಮದ ಬಗ್ಗೆ ನೀವು ಕೇಳಿರಲಾರಿರಿ. ಇಂಥ ಊರೊಂದು ಅಸ್ಸಾಂನಲ್ಲಿದೆ. ಅದರ ಹೆಸರು ಮಯೋಂಗ್. ಇಲ್ಲಿನ ಇತಿಹಾಸ ಗೊತ್ತಿರುವವರು, ಆಸುಪಾಸಿನವರು ಇಲ್ಲಿಗೆ ಕಾಲಿಡಲು ಅಂಜಿಕೊಳ್ಳುತ್ತಾರೆ.
ಭಾರತದ ಬ್ಲ್ಯಾಕ್ ಮ್ಯಾಜಿಕ್ ಕ್ಯಾಪಿಟಲ್ ಎಂದು ಕರೆಯಲ್ಪಡುವ ಊರು ಅಸ್ಸಾಂನ ಮಯೋಂಗ್ ಗ್ರಾಮ. ಇಲ್ಲಿ ಮನೆ ಮನೆಗಳಲ್ಲೂ ಒಬ್ಬ ಮಾಂತ್ರಿಕ, ಮಾಟಗಾರ ಇದ್ದಾನೆ ಎನ್ನಲಾಗುತ್ತದೆ. ಮಾಟಗಾರ್ತಿಯರೂ ಇದ್ದಾರೆ. ಇಲ್ಲಿನ ಒಂಟಿ ವಿಧವೆಯರನ್ನು ಸುತ್ತಮುತ್ತಲಿನ ಊರಿನ ಜನ ಗುಮಾನಿಯಿಂದಲೇ ನೋಡುತ್ತಾರೆ. ಇಲ್ಲಿನ ಹಳೆಯ ಜನಪದ ಕತೆಗಳು ಕೂಡ ದೆವ್ವ ಭೂತಗಳಿಂದ ಕೂಡಿವೆ. ಜನರು ಕಣ್ಮರೆಯಾಗುವುದು, ಬೇರೆ ರೂಪದಲ್ಲಿ ಬರುವುದು, ಪುರುಷರಿಗೆ ಮೋಹಿನಿ ಕಾಟ, ಸ್ತ್ರೀಯರಿಗೆ ಗಂಧರ್ವ ಪಿಶಾಚಿಯ ಕಾಟ ಹೀಗೆ.
ಶತಮಾನಗಳಿಂದ ಇಲ್ಲಿ ಮಾಟಮಂತ್ರ ಮತ್ತು ಅಲೌಕಿಕ ಚಟುವಟಿಕೆಗಳ ಅಭ್ಯಾಸಗಳು ಇವೆ. ಶಕ್ತಿ ದೇವತೆಗಳನ್ನು ಪೂಜಿಸುವುದು, ಬಲಿ ಕೊಡುವುದು ಇಲ್ಲಿ ಮಾಮೂಲು. ಇಲ್ಲಿ ನಡೆಯುವ ಮಾಟಮಂತ್ರಕ್ಕಾಗಿ ನರಬಲಿಯನ್ನೂ ಕೊಡಲಾಗುತ್ತದೆ ಎಂದು ಹೇಳಲಾಗುತ್ತದೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಯಾರೇ ಕಣ್ಮರೆಯಾದರೂ, ಅಥವಾ ನಿಗೂಢವಾಗಿ ಶವವಾಗಿ ಪತ್ತೆಯಾದರೂ ಅಂಥವರು ಇಲ್ಲಿನ ಮಾಟ ಮಂತ್ರಕ್ಕಾಗಿಯೇ ಬಲಿಯಾಗಿದ್ದಾರೆ ಎಂದು ಹೇಳಲಾಗುತ್ತದೆ.
ಕತೆಯ ಪ್ರಕಾರ ಮಹಾಭಾರತದ ರಾಕ್ಷಸಿ ಹಿಡಿಂಬಿ– ಭೀಮರ ದಾಂಪತ್ಯಕ್ಕೆ ಜನಿಸಿದ ಮಗ ಘಟೋತ್ಕಚ ಈ ಊರಿನವನಂತೆ. ಇಲ್ಲಿ ನಡೆದ ಒಂದು ವಿಚಿತ್ರ ಕಣ್ಮರೆ ಪ್ರಕರಣ 1330ರ ದಶಕದ್ದು. ಆಗ ಮೊಗಲ್ ದೊರೆ ಮುಹಮ್ಮದ್ ಶಾನ 1,00,000 ಸೈನಿಕರ ಸೈನ್ಯದ ಒಂದು ಗುಂಪು ಈ ಊರಿನ ಬಳಿಯ ಕಾಡಿನಲ್ಲಿ ಕಣ್ಮರೆಯಾಯಿತು. ಒಬ್ಬನೇ ಒಬ್ಬ ಸೈನಿಕನ ದೇಹ ಕಾಣಸಿಗಲಿಲ್ಲವಂತೆ. ಔರಂಗಜೇಬನ ಆಳ್ವಿಕೆಯ ವೃತ್ತಾಂತವಾದ ಅಲಂಗೀರ್ ನಾಮಾದಲ್ಲಿ, ಆಸ್ಥಾನದ ಇತಿಹಾಸಕಾರ ಮಿರ್ಜಾ ಮುಹಮ್ಮದ್ ಕಾಜಿಮ್ ಬರೆಯುವಂತೆ, ಅಸ್ಸಾಂನಲ್ಲಿ ಅಹೋಮ್ ಸಾಮ್ರಾಜ್ಯವನ್ನು ಸೋಲಿಸಿದಾಗ, ಇಲ್ಲಿನ ನಾಯಕ ರಾಮ್ ಸಿಂಗ್ ಅಹೋಮ್ ಸೈನ್ಯಕ್ಕಿಂತ ಮಯೋಂಗ್ ನ ಮಾಟಮಂತ್ರಕ್ಕೆ ಜನ ಹೆಚ್ಚು ಹೆದರುತ್ತಿದ್ದರು ಎಂದು ಹೇಳುತ್ತಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q