ಸಿರಾ: ಪತ್ರಿಕಾರಂಗವು ಪ್ರಜಾಪ್ರಭುತ್ವದ ಬಲಿಷ್ಠತೆ ಹಾಗೂ ಸದೃಢ ಭಾರತ ನಿರ್ಮಾಣದಲ್ಲಿ ಬಹು ಮುಖ್ಯ ಪಾತ್ರ ವಹಿಸಿದೆ. ನೈತಿಕತೆ ಇರುವವರೆಗೂ ಪತ್ರಿಕಾರಂಗದ ಬಲ ಕುಗ್ಗುವುದಿಲ್ಲ. ಸಮಾಜವನ್ನು ಜಾಗೃತಗೊಳಿಸಿ ವೃತ್ತಿ ಧರ್ಮ ಪಾಲಿಸುವವರು ನಿಜವಾದ ಪತ್ರಕರ್ತರು ಎಂದು ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು.
ನಗರದ ಕದಂಬ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶನಿವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ಪತ್ರಿಕಾ ದಿನಾಚರಣೆ, ಪತ್ರಕರ್ತರ ಪ್ರತಿಭಾವಂತ ಮಕ್ಕಳು ಹಾಗೂ ಪತ್ರಿಕಾ ವಿತರಣೆ ಮಾಡುವ ಪ್ರತಿಭಾವಂತ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾರೋಗೇರೆ ಮಹೇಶ್ ಮಾತನಾಡಿ ಪತ್ರಿಕೆಗಳು ನಿಷ್ಪಕ್ಷಪಾತ ವರದಿಗಳಿಗೆ ಮಾತ್ರ ಸೀಮಿತವಾದಾಗ ಒಂದು ಸುಂದರ ಸಮಾಜ ನಿರ್ಮಾಣದ ಕನಸು ಸಾಕಾರಗೊಳ್ಳುತ್ತದೆ. ನಮ್ಮಲ್ಲಿ ದೃಶ್ಯ ಮಾಧ್ಯಮಗಳು ಹೆಚ್ಚಾಗುತ್ತಿದ್ದಂತೆ ಮುದ್ರಣ ಎಂದೂ ಲಯ ಕಳೆದುಕೊಂಡಿಲ್ಲ, ಓದುಗರ ಸಂಖ್ಯೆ ಕಡಿಮೆಯಾಗಿಲ್ಲ, ಮಕ್ಕಳು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ರಾಜ್ಯ ಸಮಿತಿ ಸದಸ್ಯ ಜಿ.ಎನ್.ಪುರುಷೋತ್ತಮ್ ಮಾತನಾಡಿ, ಉತ್ತಮ ಸಮಾಜ ರೂಪಿಸುವಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾದದ್ದು. ಅದನ್ನರಿತು ಮಾಧ್ಯಮಗಳು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ದಿಕ್ಕಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರು.
ಡಾ.ಪಿ.ಹೆಚ್.ಮಹೇಂದ್ರಪ್ಪ ಪತ್ರಕರ್ತರ ಕರ್ತವ್ಯ ಪ್ರಜ್ಞೆ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ ಯಾವುದೇ ಸುದ್ದಿ ಪ್ರಕಟಿಸುವ ಅಥವಾ ಪ್ರಸಾರ ಮಾಡುವ ಮೊದಲು ಅದರ ಮೂಲ, ದಾಖಲೆಗಳು ಮತ್ತು ಸತ್ಯಾಂಶವನ್ನು ಪರಿಶೀಲಿಸಬೇಕು. ವದಂತಿಗಳಿಗೆ ಪ್ರಚೋದನೆ ನೀಡದೆ, ವಾಸ್ತವಿಕ ಅಂಶಗಳನ್ನು ಮಾತ್ರ ಜನರಿಗೆ ತಲುಪಿಸಬೇಕು. ಮಕ್ಕಳು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಜಿಲ್ಲಾ ಸಂಘದ ಪ್ರ.ಕಾರ್ಯದರ್ಶಿ ಟಿ.ಇ.ರಘುರಾಮ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಪ್ರ. ಕಾರ್ಯದರ್ಶಿ ಶಿವು ಚೆಂಗಾವರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಸ್ಆರ್ ಗೌಡ, ಕದಂಬ ಶಾಲೆಯ ಮುಖ್ಯಸ್ಥರಾದ ಅವಿನಾಶ್, ಲತಾ ಅವಿನಾಶ್, ಉಪಾಧ್ಯಕ್ಷರಾದ ವೀರಭದ್ರಸ್ವಾಮಿ, ಬಾಲಕೃಷ್ಣೇಗೌಡ, ಪ್ರ.ಕಾರ್ಯದರ್ಶಿ ಕುಮಾರ್, ಕಾರ್ಯದರ್ಶಿಗಳಾದ ಓಂಕಾರಪ್ಪ, ಫಕ್ರುದ್ದೀನ್, ಮಿಜಾಂಜಿ ಮಧುಸೂಧನ್, ಜಿಲ್ಲಾ ಉಪಾಧ್ಯಕ್ಷ ದಶರಥ, ನಿಕಟಪೂರ್ವ ಅಧ್ಯಕ್ಷ ಜಯಪಾಲ್, ನಗರಸಭಾ ಸದಸ್ಯೆ ಸುಶೀಲಾ ವಿರೂಪಾಕ್ಷ, ಆಶ್ರಯ ಸಮಿತಿ ಸದಸ್ಯ ನೂರುದ್ದೀನ್, ಜಿಲ್ಲಾ ಸಂಘದ ನಿರ್ದೇಶಕರಾದ ರಘು, ಶಾಲಾ ಪ್ರಾಂಶುಪಾಲ ಮ್ಯಾಥ್ಯೂ ಸೇರಿದಂತೆ ತಾಲೂಕು ಸಂಘದ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಸದಸ್ಯರು ಇದ್ದರು. ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪತ್ರಕರ್ತರ ಮಕ್ಕಳು ಹಾಗೂ ವಿವಿಧ ಪತ್ರಿಕೆಗಳನ್ನು ಹಂಚುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


