ಮಧುಗಿರಿ: ಪಟ್ಟಣದಲ್ಲಿ ಹೊಸದಾಗಿ ಮದ್ಯದಂಗಡಿಗಳಿಗೆ ಅನುಮತಿ ನೀಡಬಾರದೆಂದು ಹೋರಾಟ ನಡೆಸುತ್ತಿರುವ ಸಾಮಾಜಿಕ ಹೋರಾಟಗಾರರಿಗೆ ಬೆದರಿಕೆ ಕರೆಗಳು ಬರುತ್ತಿವೆ ಎನ್ನಲಾಗಿದ್ದು, ತಮ್ಮ ಕುಟುಂಬಗಳಿಗೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಪಟ್ಟಣದಲ್ಲಿ ಹೊಸದಾಗಿ ಮದ್ಯದಂಗಡಿ ಆರಂಭಿಸಲು ಮಹದೇವ್ ಎಂಬುವವರು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಈಗಾಗಲೇ ಪಟ್ಟಣದಲ್ಲಿ 10 ಬಾರ್ಗಳಿದ್ದು, ಮತ್ತೊಂದು ಮದ್ಯದಂಗಡಿ ಆರಂಭಿಸುವ ಉದ್ದೇಶಿತ ಸ್ಥಳದ ಸಮೀಪ ಪುರಾತತ್ವ ಇಲಾಖೆಯ ಕಲ್ಯಾಣಿ ಹಾಗೂ ಉಪವಿಭಾಗಾಧಿಕಾರಿಗಳ ಕಚೇರಿ ಇರುವುದರಿಂದ ಹೊಸ ಮದ್ಯದಂಗಡಿಗೆ ಅನುಮತಿ ನೀಡಬಾರದು ಎಂದು ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸ್ಥಳ ಪರಿಶೀಲನೆಗೆ ಅಧಿಕಾರಿಗಳು ಆಗಮಿಸಿದ ಸಂದರ್ಭದಲ್ಲಿ ಭೀಮ್ ಆರ್ಮಿ ಸಂಘಟನೆಯ ತಾಲೂಕು ಅಧ್ಯಕ್ಷ ನಟರಾಜ್ ಮೌರ್ಯ, ನಗರ ಅಧ್ಯಕ್ಷ ಅನಿಲ್ ಕುಂಬ್ಳೆ, ಕರ್ನಾಟಕ ಜನಪರ ವೇದಿಕೆಯ ರಾಜ್ಯ ಉಪಾಧ್ಯಕ್ಷ ರಂಗನಾಥ್, ಅಂಬೇಡ್ಕರ್ ಸೇನೆಯ ತಾಲೂಕು ಅಧ್ಯಕ್ಷ ಸಿದ್ದಲಿಂಗ ಆರಾಧ್ಯ ಹಾಗೂ ಸಾಮಾಜಿಕ ಹೋರಾಟಗಾರ ಮಧುಕುಮಾರ್ ಅವರು ಹೊಸ ಮದ್ಯದಂಗಡಿ ಆರಂಭಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಮನವಿ ಸಲ್ಲಿಸಿದ್ದರು.
ಪಟ್ಟಣದಲ್ಲಿ ಈಗಾಗಲೇ ಸಾಕಷ್ಟು ಬಾರ್ಗಳಿದ್ದು, ಮತ್ತಷ್ಟು ಮದ್ಯದಂಗಡಿಗಳ ಬದಲಿಗೆ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಬೇಕು ಎಂಬ ಒತ್ತಾಯದೊಂದಿಗೆ ಹೋರಾಟ ಆರಂಭಿಸಿದ್ದರು.
ಈ ಹೋರಾಟದ ಹಿನ್ನೆಲೆಯಲ್ಲಿ ಮಹದೇವ್ ಅವರ ಕಡೆಯವರು ತಮಗೆ ಹಾಗೂ ತಮ್ಮ ಕುಟುಂಬದವರಿಗೆ ದೂರವಾಣಿ ಮೂಲಕ ಬೆದರಿಕೆ ಕರೆಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಹೋರಾಟಗಾರರು, ಬೆದರಿಕೆ ಕರೆಗಳ ಕುರಿತು ಸೂಕ್ತ ತನಿಖೆ ನಡೆಸಿ ತಮ್ಮ ಕುಟುಂಬಕ್ಕೆ ಪೊಲೀಸ್ ರಕ್ಷಣೆ ಒದಗಿಸುವಂತೆ ಎಸ್ಪಿಯವರಿಗೆ ಮನವಿ ಮಾಡಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
