ಕೊರಟಗೆರೆ : 112 ವರ್ಷಗಳವರೆಗೂ ಸಹಿತ ನಿರಂತರವಾಗಿ ದಾಸೋಹದ ಮುಖಾಂತರವಾಗಿ ತಮ್ಮ ಕಾಯಕವನ್ನು ದೇವರ ಕೆಲಸವೆಂದು ತಿಳಿದು, ಕಾಯಕವೇ ಕೈಲಾಸವೆಂಬಂತೆ ಶ್ರೀ ಮಠವನ್ನು ನಡೆಸಿಕೊಂಡು ಬಂದಿರುವ ತ್ರಿವಿಧ ದಾಸೋಹಿಗಳಾದ ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರು ನಮಗೆಲ್ಲ ಆದರ್ಶ ಎಂದು ಸಿದ್ಧರಬೆಟ್ಟದ ಬಾಳೆಹೊನ್ನೂರು ಖಾಸಾಶಾಖಾ ಮಠದ ಪೀಠಾಧ್ಯಕ್ಷರಾದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ನುಡಿದರು.
ಕೊರಟಗೆರೆ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಅಖಿಲಭಾರತ ವೀರಶೈವ ಮಹಾಸಭಾ ಹಾಗೂ ಸಮಸ್ತ ಭಕ್ತಾದಿಗಳಿಂದ ಆಯೋಜಿಸಿದ್ದ ಪರಮಪೂಜ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ118ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮೆಲ್ಲರಿಗೂ ಸಹಿತ ಆರಾಧ್ಯದೈವವಾಗಿ, ನಡೆದಾಡುವ ದೇವರಾಗಿ ನಮ್ಮ ಬದುಕಿನುದ್ದಕ್ಕೂ ಕಾಯಕವನ್ನೇ ಕೈಲಾಸವೆಂದು ನಂಬಿ ನಿರಂತರವಾಗಿ ಸದ್ಭಕ್ತರ ಸೇವೆಯಲ್ಲಿಯೇ ತೊಡಗಿಸಿಕೊಂಡು ನಮಗೆಲ್ಲ ಆದರ್ಶಗಳನ್ನು ನೀಡಿರುವ ಪೂಜ್ಯರಿಗೆ ಭಕ್ತಿ ಪೂರಕ ನಮನ ಸಲ್ಲಿಸುತ್ತಾ ಅವರ ಮಾರ್ಗದರ್ಶನದಂತೆ ನಡೆಯೋಣ ಎಂದರು.
ಶ್ರೀಗಳ ಜೀವನದ ತತ್ತ್ವಗಳು ಯುವ ಜನತೆಗೆ ಮಾರ್ಗ ದರ್ಶಕವಾಗಬೇಕು” ಎಂದು ಅವರು ಶುಭ ಹಾರೈಸಿದರು.
ಅಕ್ಷರ ಮತ್ತು ಅನ್ನ ದಾಸೋಹ ಸಾವಿರಾರು ವಿದ್ಯಾರ್ಥಿಗಳ ಬಾಳಲಿ ಬೆಳಕಾಗಿದೆ. ದೇಶ ಮತ್ತು ಸಮಾಜದ ಪ್ರಗತಿಯ ಬಗ್ಗೆ ಕಳಕಳಿ ಹೊಂದಿ ಮುಂದಿನ ಪೀಳಿಗೆಯ ಬೆಳವಣಿಗೆಗಾಗಿ ಮಾದರಿಯಾದಂತಹ ಶ್ರೀ ಶಿವಕುಮಾರ ಸ್ವಾಮಿಗಳನ್ನು ಪಡೆದ ನಾವೇ ಧನ್ಯರು ಎಂದು ತಾಲ್ಲೂಕಿನ ಅಖಿಲಭಾರತ ವೀರಶೈವ ಮಹಾ ಸಭಾದ ಆಧ್ಯಕ್ಷರಾದ ವೀರಭದ್ರಯ್ಯ ಶ್ರೀಗಳಿಗೆ ನಮನ ಸಲ್ಲಿಸಿ ಮಾತನಾಡಿದರು.
ಪರಮ ಪೂಜ್ಯರ ಜನ್ಮ ದಿನನೋತ್ಸವವು ಹಬ್ಬದದಂತೆ ಕಳೆಕಟ್ಟಿತ್ತು. ಸಾವಿರಾರು ಭಕ್ತಾದಿಗಳು ಭಾಗವಹಿಸಿ ಭಕ್ತಿನಮನ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಆಶೀರ್ವಾದ ಪಡೆದುಕೊಂಡರು.
ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಯವರು ಸ್ವತಃ ತಾವೇ ಪ್ರಸಾದ ವಿತರಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಅಪೂರ್ವ ಅನಂತರಾಮು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಭದ್ರಣ್ಣ, ಉಪಾಧ್ಯಕ್ಷ ವಿನಯ್ ಕುಮಾರ್, ಪ್ರಧಾನ ಕಾರ್ಯದರ್ಶಿ ಚೆನ್ನ ಬಸವರಾಧ್ಯ, ಖಜಾಂಚಿ ಜಿ.ಎಂ.ಶಿವಾನಂದ್, ಜಗಜ್ಯೋತಿ ಬಸವೇಶ್ವರ ದೇವಾಲಯದ ಅಧ್ಯಕ್ಷ ಕೆ.ಎಂ ಸುರೇಶ್, ಪ್ರಧಾನ ಕಾರ್ಯದರ್ಶಿ ಜಗದೀಶ್, ಖಜಾಂಚಿ ಕೆ.ಆರ್.ಕಿರಣ್, ಮಹಿಳಾ ಸದಸ್ಯರಾದ ಮಂಜುಳಾ ಶಂಭುಲಿಂಗಾರಾಧ್ಯ, ಚಂದ್ರಕಲಾ ಲೋಕೇಶ್, ಹಿರಿಯ ಮುಖಂಡರಾದ ಪರ್ವತಯ್ಯ, ಡೇರಿ ಸದಾಶಿವಯ್ಯ, ಜ್ಯೋತಿಪ್ರಕಾಶ್, ಕೊಡ್ಲಹಳ್ಳಿ ಆರಾಧ್ಯ, ಸೇರಿದಂತೆ ಹಲವು ಸಂಘಟನೆಗಳ ಮತ್ತು ಸಮುದಾಯದ ಮುಖಂಡರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4