ತಿಪಟೂರು: ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ಉಸ್ತುವಾರಿಯ ತುಮಕೂರಿನ ತಿಪಟೂರು ನಗರದ 31ನೇ ವಾರ್ಡ್‌ನ ಗೋರಗೊಂಡನಹಳ್ಳಿಯ ಎ.ಕೆ. ಕಾಲೋನಿಯಲ್ಲಿ ದಲಿತ ಕುಟುಂಬಗಳು ದೌರ್ಜನ್ಯಕ್ಕೊಳಗಾಗಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸರ್ವೆ ನಂಬರ್ 93/4ಬಿ2 ರಲ್ಲಿನ ದಲಿತರಿಗೆ ಸೇರಿದ ಜಮೀನು ಹಾಗೂ ಸರ್ಕಾರಿ ರಸ್ತೆಯನ್ನು ಅದೇ ಗ್ರಾಮದ ಪ್ರಭಾವಿ ವ್ಯಕ್ತಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ನಿವಾಸಿಗಳು ದೂರಿದ್ದಾರೆ.
ಗ್ರಾಮದ ಚೇರ್ಮನ್ ಶಿವನಂಜಪ್ಪ ಅವರ ಕುಟುಂಬಸ್ಥರು ದಲಿತರು ಓಡಾಡುವ ರಸ್ತೆಗೆ ಅಡ್ಡಲಾಗಿ ಶೆಡ್ ಹಾಗೂ ಬೇಲಿ ನಿರ್ಮಿಸಿ ದೌರ್ಜನ್ಯ ಎಸಗುತ್ತಿದ್ದಾರೆ. ಇದರಿಂದಾಗಿ ಕಾಲೋನಿಯ ನಿವಾಸಿಗಳು ಮತ್ತು ಶಾಲಾ ಮಕ್ಕಳು ದೈನಂದಿನ ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೇವಲ ಸಂಚಾರವಷ್ಟೇ ಅಲ್ಲದೆ, ಜಮೀನಿನ ಪಕ್ಕದಲ್ಲೇ ತಿಪ್ಪೆಗುಂಡಿ ನಿರ್ಮಿಸಿ ಗಲೀಜು ನೀರನ್ನು ಹರಿಸಲಾಗುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದ್ದು, ವಯೋವೃದ್ಧರು ಹಾಗೂ ಮಕ್ಕಳು ಅನಾರೋಗ್ಯಕ್ಕೀಡಾಗುತ್ತಿದ್ದಾರೆ ಎಂದು ದೂರಲಾಗಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಒತ್ತುವರಿ ನಡೆದಿರುವುದು ಸಾಬೀತಾಗಿದೆ. ಆದರೂ ಅಧಿಕಾರಿಗಳು ಕ್ರಮ ಕೈಗೊಳ್ಳಲು ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ. ಡಿಸೆಂಬರ್ 23 ರಂದು ಸರ್ವೆ ಇಲಾಖೆ ಸಿಬ್ಬಂದಿ ಪೊಲೀಸ್ ಬಂದೋಬಸ್ತಿನಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ದಲಿತ ಸಂಘಟನೆಗಳು ಹಾಗೂ ನಿವಾಸಿಗಳು ಅಕ್ರಮ ಒತ್ತುವರಿ ತೆರವುಗೊಳಿಸುವಂತೆ ಆಗ್ರಹಿಸಿದರು.
ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಭೂ ಕಬಳಿಕೆ ಕಾಯ್ದೆಯಡಿ ಪ್ರಕರಣ ದಾಖಲಿಸಿ, ನ್ಯಾಯ ಒದಗಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡುವುದಾಗಿ ಕಾಲೋನಿಯ ನಿವಾಸಿಗಳು ಎಚ್ಚರಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


