ತಿಪಟೂರು: ನಗರದಲ್ಲಿ ಯುಜಿಡಿ ಅವ್ಯವಸ್ಥೆ ಹಾಗೂ ತಿಪಟೂರು ಮತ್ತು ಈಚನೂರು ಕೆರೆಗೆ ನೀರು ತುಂಬಿಸಲು ಒತ್ತಾಯಿಸಿ ನಗರದ ಕೆಂಪಮ್ಮದೇವಿ ದೇವಸ್ಥಾನದಿಂದ ಸಿಂಗೀ ನಂಜಪ್ಪ ವೃತ್ತದವರೆಗೆ ಸೋಮವಾರ ಪಾದಯಾತ್ರೆ ನಡೆಸಿ ಪ್ರತಿಭಟಿಸಿ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಮಾತನಾಡಿ, ತಾಲ್ಲೂಕಿನ ಜನರಿಗೆ ಕಂಟಕವಾಗಿರುವ ಯುಜಿಡಿ ಕೊಳಚೆ ನೀರಿನಿಂದ ಈಚನೂರು ಕೆರೆ ಕಲುಷಿತವಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ. ತಿಪಟೂರು ಅಮಾನಿಕೆರೆಗೆ ನೀರು ತುಂಬದ ಕಾರಣ ಕುಡಿಯುವ ನೀರಿಗೆ ಹೆಚ್ಚಿನ ಸಮಸ್ಯೆ ಉಂಟಾಗಿದೆ. ತಾಲ್ಲೂಕು ಅಭಿವೃದ್ಧಿ ಶೂನ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯುಜಿಡಿ ಕೊಳಚೆ ನೀರಿನಿಂದ ನಗರ ರಾಜ್ಯದಾದ್ಯಂತ ಅಪಖ್ಯಾತಿ ಪಡೆಯುತ್ತಿದೆ. ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈಡೇನಹಳ್ಳಿ ವೆಟ್ ವೆಲ್ ಹಾಗೂ ಗೊರಗೊಂಡನಹಳ್ಳಿ ವೆಟ್‌ವೆಲ್ ಗಳು ಸರಿಯಾಗಿ ಕಾರ್ಯನಿರ್ವಹಣೆ ಮಾಡದ ಕಾರಣ ಕೋಡಿಸರ್ಕಲ್ ಬಳಿ ಯುಜಿಡಿ ನೀರು ಉಕ್ಕಿಹರಿಯುತ್ತಿದೆ. ಜನಸಾಮಾನ್ಯರು ಸಂಚಾರ ಕಷ್ಟಕರವಾಗಿದೆ. ಕೊಳಚೆ ನೀರು ಹಳ್ಳಗಳ ಮೂಲಕ ಹಿಂಡಿಸ್ಕೆರೆ ನಂತರ ಈಚನೂರು ಕೆರೆ ಸೇರುತ್ತದೆ. ನಗರದ ಜನ ಪುನಃ ಕೊಳಚೆ ನೀರನ್ನೇ ಕುಡಿಯುವ ದುಃಸ್ಥಿತಿಗೆ ಬರುತ್ತದೆ. ನಗರದ ಹಾಸನ ರಸ್ತೆ, ಹಾಲ್ಕುರಿಕೆ ರಸ್ತೆ, ಶೆಟ್ಟಿಕೆರೆ ರಸ್ತೆ ಸೇರಿ ಬಹುತೇಕ ರಸ್ತೆಗಳು ಗುಂಡಿಬಿದ್ದು ಯಮ ಸ್ವರೂಪಿಯಾಗಿವೆ ಎಂದರು.
ನಗರಸಭೆ ಪೌರಾಯುಕ್ತರು ಸಾರ್ವಜನಿಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಪೌರಾಯುಕ್ತರು ವರ್ಗಾವಣೆ ಮಾಡಿಸಿ ಇಲ್ಲದೇ ಹೋದರೆ ನಗರಸಭೆ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸುವ ಎಚ್ಚರಿಕೆ ನೀಡಿದರು.
ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮತ್ತಿಘಟ್ಟ ಶಿವಸ್ವಾಮಿ ಮಾತನಾಡಿ, ತಾಲ್ಲೂಕಿನ ಯಾವುದೇ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ಗ್ಯಾರಂಟಿ ಯೋಜನೆಗೆ ಹಣ ಖರ್ಚು ಮಾಡಿ, ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲದೆ ಖಜಾನೆ ಖಾಲಿಯಾಗಿದೆ. ಯುಜಿಡಿ ಕೇವಲ ಹಣ ನುಂಗಲು ದಾರಿ ಮಾಡಿಕೊಂಡಿದ್ದಾರೆ. ಈಚನೂರು ಕೆರೆ ಕಲುಷಿತವಾಗಿದ್ದು ಈ ನೀರು ಕುಡಿದರೆ, ಅಪಾಯಕಾರಿ ರೋಗಗಳಿಗೆ ತುತ್ತಾಗುವ ಆತಂಕವಿದೆ. ರಸ್ತೆಗುಂಡಿ ಮುಚ್ಚಲು ಸರ್ಕಾರದಲ್ಲಿ ಹಣವಿಲ್ಲ. ಜಿಲ್ಲಾಧಿಕಾರಿ ನಗರದ ಯುಜಿಡಿ ಸಮಸ್ಯೆಗೆ ಪರಿಹಾರ ನೀಡಿ ಎಂದು ಒತ್ತಾಯಿಸಿದರು.
ನಗರ ಯುವ ಘಟಕದ ಅಧ್ಯಕ್ಷ ಗೊರಗೊಂಡನಹಳ್ಳಿ ಸುದರ್ಶನ್, ಷಡಕ್ಷರಿ, ರಾಜು, ಧನಂಜಯ್ ಪೆದ್ದಿಹಳ್ಳಿ, ನಟರಾಜ್ ಷಡಕ್ಷರಿ, ರಾಜಶೇಖರ್, ಸತೀಶ್ ಮಾರನಗೆರೆ, ಜಕ್ಕನಹಳ್ಳಿ ಮೋಹನ್, ಕವಿತಾ ಮಹೇಶ್ ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



