ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೃಷ್ಣನಗರದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಟಿಎಂಸಿಯ ಆದ್ಯತೆ ರಾಜ್ಯದ ಅಭಿವೃದ್ಧಿಯಲ್ಲ, ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಟಿಎಂಸಿ ಪಶ್ಚಿಮ ಬಂಗಾಳದ ಜನರನ್ನು ನಿರಾಶೆಗೊಳಿಸಿದೆ. ಆ ಪಕ್ಷಕ್ಕೆ ನಿರಂತರವಾಗಿ ಮತ ಹಾಕಿದವರಿಗೆ ದ್ರೋಹ ಮಾಡಿದೆ. ಈ ಪಕ್ಷವು ದೌರ್ಜನ್ಯ ಮತ್ತು ದ್ರೋಹಕ್ಕೆ ಮತ್ತೊಂದು ಹೆಸರಾಗಿದೆ ಎಂದು ಪ್ರಧಾನಿ ಹೇಳಿದರು.
ಟಿಎಂಸಿ ಬಂಗಾಳದ ಜನರನ್ನು ಬಡವಾಗಿಡಲು ಬಯಸುತ್ತದೆ, ಇದರಿಂದಾಗಿ ತನ್ನ ರಾಜಕೀಯದ ಆಟ ಮುಂದುವರಿಯುತ್ತದೆ ಎಂದು ಭಾವಿಸಿದೆ. ಗೂಂಡಾಗಳು, ಮಾಫಿಯಾದ ಬೆಳವಣಿಗೆಗೆ ಕಾರಣವಾಗಿದೆ. ಆಡಳಿತ ಪಕ್ಷವು ಏಮ್ಸ್ ಆವರಣದಲ್ಲಿ ಕಲ್ಯಾಣಿ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದೆ ಮತ್ತು ಹಸಿರು ನ್ಯಾಯಮಂಡಳಿಯ ಅನುಮತಿ ಪ್ರಶ್ನಿಸುತ್ತಿದೆ ಎಂದು ಪ್ರಧಾನಿ ಟೀಕಿಸಿದರು.
‘ನಾನು ಇತ್ತೀಚೆಗೆ ನಾಡಿಯಾ ಜಿಲ್ಲೆಯ ಕಲ್ಯಾಣಿಯಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಎಐಐಎಂಎಸ್ ಅನ್ನು ಉದ್ಘಾಟಿಸಿದ್ದೇನೆ. ಆದರೆ, ಕಲ್ಯಾಣಿ ಏಮ್ಸ್ ನಿರ್ಮಾಣದ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರ ಕಳವಳ ವ್ಯಕ್ತಪಡಿಸಿದೆ, ಏಕೆ ಅನುಮತಿ ಪಡೆಯಲಿಲ್ಲ ಎಂದು ಪ್ರಶ್ನಿಸಿದೆ’ ಎಂದು ಪ್ರಧಾನಿ ಹೇಳಿದರು.
‘ಪಶ್ಚಿಮ ಬಂಗಾಳದಲ್ಲಿ ಗೂಂಡಾಗಿರಿಗೆ ಮುಕ್ತ ಅವಕಾಶವಿದೆ. ಆದರೆ ಟಿಎಂಸಿ ಸರ್ಕಾರವು ಪರಿಸರ ಅನುಮತಿಗಳ ವಿಷಯದಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


