ತುಮಕೂರು: ರಾಷ್ಟ್ರೀಯ ಹೆದ್ದಾರಿಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಅದನ್ನು ದುರಸ್ತಿ ಮಾಡುವಂತೆ ಆಗ್ರಹಿಸಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ನಗರದ ಕ್ಯಾತ್ಸಂದ್ರ ಟೋಲ್ ಗೇಟ್ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಯಿತು.
ನಗರದ ಊರುಕೆರೆಯ ಬಳಿಯಿಂದ ಕ್ಯಾತ್ಸಂದ್ರ ಟೋಲ್ ನ ವರೆಗೂ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಹಾಳಾಗಿದ್ದು, ವಾಹನ ಸವಾರರು ಸಂಚರಿಸಲು ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದನ್ನು ಖಂಡಿಸಿ ಹಾಗೂ ಉತ್ತಮ ರಸ್ತೆ ನಿರ್ಮಾಣ ಮಾಡಿಕೊಡಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೇಮಠ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ಅಡ್ಡಲಾಗಿ ಕೂತು ಪ್ರತಿಭಟನೆ ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆಮಠ್, ಪ್ರತಿ ದಿನ ಈ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಸ್ತೆ ಅವ್ಯವಸ್ಥೆಯಿಂದ ವಾಹನ ಸವಾರರ ಗೋಳು ಹೇಳತೀರದ್ದಾಗಿದೆ. ಇದೇ ರಸ್ತೆಯಲ್ಲಿ ಹಲವಾರು ಅಪಘಾತಗಳೂ ಸಹ ಸಂಭವಿಸಿವೆ. ಶುಲ್ಕ ಪಾವತಿ ಮಾಡುವ ರಸ್ತೆ ಇದಾಗಿದ್ದರಿಂದ ಸರಿಪಡಿಸುವಂತೆ ಸುಮಾರು ಎರಡು ತಿಂಗಳುಗಳಿಂದ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ನಮ್ಮ ಮನವಿಗೆ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಇಂದು ಕೇಂದ್ರ ಹಾಗೂ ರಾಜ್ಯ ಸರಗಕಾರಗಳ ಉದಾಸೀನ ಧೋರಣೆ ಖಂಡಿಸಿ ಜಿಲ್ಲಾ ಯುವಕಾಂಗ್ರೆಸ್ ಹಾಗೂ ನಗರ ಯುವ ಕಾಂಗ್ರೆಸ್ ವತಿಯಿಂದ ರಸ್ತೆ ತಡೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ರಸ್ತೆ ತಡೆ ನಡೆಸಿದ ವೇಳೆ ಪ್ರತಿಭಟನಾಕಾರರನ್ನು ಪೋಲಿಸರು ಬಂಧಿಸಿದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700