ತುಮಕೂರು: ಒಂದೇ ದಿನ ನಾಲ್ವರು ಮಕ್ಕಳು ನಾಪತ್ತೆಯಾಗಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕಬಾಣಗೆರೆ ಗ್ರಾಮದಲ್ಲಿ ನಡೆದಿದ್ದು, ಪೋಷಕರು ತೀವ್ರ ಆತಂಕದಲ್ಲಿದ್ದಾರೆ.
ಮಂಜುಳಾ (13), ಮಧು ಕುಮಾರ್ (13), ಮಹಾಲಕ್ಷ್ಮಿ (15) ಹಾಗೂ ಭಾನು (14) ಕಣ್ಮರೆಯಾದ ಮಕ್ಕಳು ಎಂದು ಗುರುತಿಸಲಾಗಿದೆ. ಚಿಕ್ಕಬಾಣಗೆರೆ ಗ್ರಾಮದ ಮಲ್ಲಿಕಾರ್ಜುನ ಅವರ ಮಕ್ಕಳಾದ ಮಂಜುಳಾ ಹಾಗೂ ಮಧುಕುಮಾರ್ ಹಾಗೂ ಅದೇ ಗ್ರಾಮದ ಕೃಷ್ಣಪ್ಪನ ಮಕ್ಕಳಾದ ಮಹಾಲಕ್ಷ್ಮಿ ಹಾಗೂ ಭಾನು ಶನಿವಾರ ಮಧ್ಯಾಹ್ನ ಮನೆಯಿಂದ ಹೋದವರು ಕಣ್ಮರೆಯಾಗಿದ್ದಾರೆ.
ಮಕ್ಕಳಿಗಾಗಿ ಸಂಬಂಧಿಕರ ಮನೆ ಸೇರಿದಂತೆ ಎಲ್ಲಾ ಕಡೆ ಹುಡುಕಿದರೂ ಅವರ ಪತ್ತೆಯಾಗದೇ ಪೋಷಕರು ಹೈರಾಣಾಗಿದ್ದಾರೆ. ಮಕ್ಕಳು ಪತ್ತೆಯಾಗದ ಹಿನ್ನೆಲೆಯಲ್ಲಿ ಪೋಷಕರಲ್ಲಿ ಆತಂಕ ಹೆಚ್ಚಿದೆ.
ಮಕ್ಕಳು ನಾಪತ್ತೆಯಾದ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಹುಡುಕಿ ಕೊಡುವಂತೆ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪಟ್ಟನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಮಕ್ಕಳ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy