ತುಮಕೂರು: ಸುರೇಶ್ ಗೌಡ ರಾಜೀನಾಮೆ ನೀಡಿದ ನಂತರ ಖಾಲಿಯಿದ್ದ ಸ್ಥಾನಕ್ಕೆ ತಿಗಳ ಸಮುದಾಯದ ಲಕ್ಷ್ಮೀಶ್, ಕುರುಬ ಸಮುದಾಯದ ಬಿ.ಕೆ.ಮಂಜುನಾಥ್ ಅವರನ್ನು ಜಿಲ್ಲಾಧ್ಯಕ್ಷರಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇಮಕ ಮಾಡಿದ್ದಾರೆ.
ಇದೇ ಮೊದಲ ಬಾರಿಗೆ ಒಂದು ಜಿಲ್ಲೆಗೆ ಇಬ್ಬರು ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಲಾಗಿದ್ದು, ಇದು ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರಲ್ಲಿ ಹಲವು ಗೊಂದಲಗಳಿಗೆ ಕಾರಣವಾಗಿದೆ.
ಲಕ್ಷ್ಮೀಶ್ ಅವರಿಗೆ 7 ತಾಲೂಕುಗಳು: ತುಮಕೂರು ನಗರ, ಗ್ರಾಮಾಂತರ, ಕುಣಿಗಲ್, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ ತಾಲೂಕಿನ ಜವಾಬ್ದಾರಿ ವಹಿಸಲಾಗಿದೆ.
ಬಿ ಕೆ ಮಂಜುನಾಥ್ ರವರಿಗೆ ಮಧುಗಿರಿ, ಕೊರಟಗೆರೆ, ಶಿರಾ, ಪಾವಗಡ 4 ತಾಲೂಕಿನ ಉಸ್ತುವಾರಿಯನ್ನು ನೀಡಲಾಗಿದೆ.
ಸಂಘ ಪರಿವಾರದಲ್ಲಿ ಗುರುತಿಸಿಕೊಂಡಿರುವ ಲಕ್ಷ್ಮೀಶ್ ಅವರು ಅಧ್ಯಕ್ಷ ಸ್ಥಾನದ ಮೇಲೆ ಬಹಳ ದಿನಗಳಿಂದ ಕಣ್ಣಿಟ್ಟಿದ್ದರು. ಶಿರಾ ಭಾಗದಲ್ಲಿ ಬಿಜೆಪಿಯನ್ನು ಸಂಘಟಿಸುತ್ತಿರುವ ಮಂಜುನಾಥ್ ಅವರಿಗೆ ಬಯಸದೆ ಬಂದ ಭಾಗ್ಯ ಎಂಬಂತೆ ಅಧ್ಯಕ್ಷ ಹುದ್ದೆ ಒಲಿದು ಬಂದಿದೆ.
ಮಧುಗಿರಿ ಜಿಲ್ಲೆ ಯಾವಾಗ ಆಯ್ತು?
ಒಂದು ಪಕ್ಷಕ್ಕೆ ಒಂದು ಜಿಲ್ಲೆಗೆ ಒಬ್ಬರೇ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡುವುದು ವಾಡಿಕೆ. ಆದರೆ ಈ ಬಾರಿ ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ತುಮಕೂರು ಜಿಲ್ಲೆ ಹಾಗೂ ಮಧುಗಿರಿ ಜಿಲ್ಲೆ ಎಂದು ವಿಂಗಡಿಸಿ ಇಬ್ಬರು ಸಾರಥಿಗಳನ್ನು ನೇಮಕಮಾಡಿ ಪಕ್ಷದಲ್ಲಿ ಬಿರುಕು ಮೂಡಿಸಲು ರಾಜ್ಯಾಧ್ಯಕ್ಷರು ಮುಂದಾಗಿದ್ದಾರೆ. ಮಧುಗಿರಿ ಜಿಲ್ಲೆ ಯಾವಾಗ ಆಯ್ತು ಎಂದು ಜಾಲತಾಣದಲ್ಲಿ ಬಿಜೆಪಿ ಕಾರ್ಯಕರ್ತರು ಕಿಡಿಕಾರಿದ್ದಾರೆ.
ಹಿಂದುಳಿದ ವರ್ಗಗಳಿಗೆ ಪಕ್ಷದಲ್ಲಿ ಆದ್ಯತೆ ಕೊಟ್ಟಿರುವುದು ಸಂತಸದ ವಿಚಾರ ಆದರೆ ಇಬ್ಬರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿರುವುದಾದರೂ ಏಕೆ ? ಎನ್ನುವ ಪ್ರಶ್ನೆಗಳು ಇದೀಗ ಹುಟ್ಟಿಕೊಂಡಿವೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy