ತುಮಕೂರು: ನಗರದ ಉದ್ಯಮಿಯೊಬ್ಬರಿಗೆ ಪ್ರಸಿದ್ಧ ಬಟ್ಟೆ ಬ್ರ್ಯಾಂಡ್ ‘ಸ್ನಿಚ್’ (Snitch) ಕಂಪನಿಯ ಫ್ರಾಂಚೈಸಿ ಕೊಡುವುದಾಗಿ ನಂಬಿಸಿ ಬರೋಬ್ಬರಿ 8.75 ಲಕ್ಷ ರೂಪಾಯಿಗಳನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ? ನಗರದ ಕೆ.ಆರ್. ಬಡಾವಣೆಯ ನಿವಾಸಿ ಹಾಗೂ ಉದ್ಯಮಿ ಚಂದನ್ ಕುಮಾರ್ ಅವರು ‘ಸ್ನಿಚ್’ ಕಂಪನಿಯ ಬಟ್ಟೆ ಮಳಿಗೆಯನ್ನು ಆರಂಭಿಸಲು ನಿರ್ಧರಿಸಿದ್ದರು. ಈ ಸಂಬಂಧ ಫ್ರಾಂಚೈಸಿ ಪಡೆಯುವ ಬಗ್ಗೆ ಗೂಗಲ್‌ನಲ್ಲಿ ಮಾಹಿತಿ ಹುಡುಕುತ್ತಿದ್ದಾಗ, ಅಪರಿಚಿತ ವ್ಯಕ್ತಿಗಳು ಅವರನ್ನು ಸಂಪರ್ಕಿಸಿದ್ದಾರೆ. ತಾವು ಕಂಪನಿಯ ಪ್ರತಿನಿಧಿಗಳೆಂದು ಪರಿಚಯಿಸಿಕೊಂಡ ವಂಚಕರು, ಚಂದನ್ ಅವರಿಂದ ಮಳಿಗೆಯ ವಿಡಿಯೊ, ಫೋಟೊ ಮತ್ತು ಬ್ಯಾಂಕ್ ವಿವರಗಳನ್ನು ಪಡೆದುಕೊಂಡಿದ್ದಾರೆ.
ಹಂತ ಹಂತವಾಗಿ ಹಣ ವಸೂಲಿ: ಫ್ರಾಂಚೈಸಿ ಮಂಜೂರು ಮಾಡುವುದಾಗಿ ನಂಬಿಸಿದ ಕಿಲಾಡಿಗಳು, ಆರಂಭದಲ್ಲಿ ನೋಂದಣಿ ಶುಲ್ಕವಾಗಿ ₹2.75 ಲಕ್ಷ ಪಾವತಿಸುವಂತೆ ಕೇಳಿದ್ದಾರೆ. ಅದನ್ನು ಪಾವತಿಸಿದ ನಂತರ, ಭದ್ರತಾ ಠೇವಣಿಯಾಗಿ ₹12 ಲಕ್ಷ ನೀಡಬೇಕು ಎಂದು ತಿಳಿಸಿ, ಮೊದಲ ಕಂತಿನ ರೂಪದಲ್ಲಿ ಮತ್ತೆ ₹6 ಲಕ್ಷ ವರ್ಗಾಯಿಸಿಕೊಂಡಿದ್ದಾರೆ.
ಹೀಗೆ ಒಟ್ಟು ₹8.75 ಲಕ್ಷ ಪಾವತಿಸಿದ ನಂತರ, ಅನುಮಾನಗೊಂಡ ಚಂದನ್ ಅವರು ನೇರವಾಗಿ ಕಂಪನಿಯನ್ನು ಸಂಪರ್ಕಿಸಿದಾಗ ತಮಗೆ ವಂಚನೆಯಾಗಿರುವುದು ಅರಿವಿಗೆ ಬಂದಿದೆ.
ಸೈಬರ್ ಠಾಣೆಯಲ್ಲಿ ದೂರು: ಹಣ ಕಳೆದುಕೊಂಡ ಉದ್ಯಮಿ ಕೂಡಲೇ ತುಮಕೂರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರ ಪತ್ತೆಗೆ ಬಲೆ ಬೀಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


