ಕಲ್ಪತರು ನಾಡಿನಲ್ಲಿ ವಿದ್ಯಾ ರ್ಥಿಗಳ ಆತ್ಮಹತ್ಯೆ ಪ್ರಕರಣ ಹೆಚ್ಚಾಗುತ್ತಿದ್ದು ಕಳೆದ ಒಂದು ವಾರದಿಂದ ಮೂವರು ನೇಣಿಗೆ ಕೊರಳೊಡ್ಡಿದ್ದು ಪೋಷಕರಲ್ಲಿ ಆತಂಕ ಎದುರಾಗಿದೆ.
ಕಳೆದ ಸೋಮವಾರ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 6ನೇ ಸೆಮಿಸ್ಟರ್‍ನಲ್ಲಿ ಓದುತ್ತಿದ್ದ ಮಹಾರಾಷ್ಟ್ರ ಮೂಲದ ಸೋಹನ್‍ನಾಥ್ ಬಾಲಂಕರ್, ಮತ್ತೊಂದು ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಮೈಸೂರು ಮೂಲದ ವಿದ್ಯಾರ್ಥಿನಿ ಶುಕ್ರವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡರೆ, ಹಿರಿಯೂರು ಮೂಲದ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಾರದಲ್ಲಿ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ. ದ್ವಿತೀಯ ಪಿಯುಸಿ ಆಂತರಿಕ ಪಠ್ಯದಲ್ಲಿ ಕಡಿಮೆ ಅಂಕ ಬಂದಿತೆಂದು ಮನನೊಂದು ಪ್ರಮೋದ್ ನೇಣಿಗೆ ಶರಣಾಗಿದ್ದರೆ, ಉಳಿದ ಇಬ್ಬರು ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದುಬಂದಿಲ್ಲ.
ಈ ಘಟನೆಯಿಂದ ಇಡೀ ನಗರವೇ ಬೆಚ್ಚಿಬಿದ್ದಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೋಲೀಸರು ವಿದ್ಯಾರ್ಥಿಗಳ ಆತ್ಮಹತ್ಯೆಗೆ ನಿಖರ ಕಾರಣದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕಿವಿಮಾತು: ವಿದ್ಯಾರ್ಥಿಗಳು ಓದುವ ಸಮಯದಲ್ಲಿ ಯಾವುದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ವಿದ್ಯಾಭ್ಯಾಸದ ಕಡೆಗೆ ಗಮನಹರಿಸಬೇಕು. ಸಮಸ್ಯೆಗಳನ್ನು ಎದುರಿಸುವ ಆತ್ಮಸ್ಥೈರ್ಯ ಹೊಂದಿರಬೇಕು. ಎಲ್ಲದಕ್ಕೂ ಆತ್ಮಹತ್ಯೆವೊಂದೇ ಮಾರ್ಗವಲ್ಲ. ನಿಮ್ಮನ್ನು ನಂಬಿ ಪೋಷಕರು ಇರುತ್ತಾರೆ. ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಮಾಡಬೇಡಿ ಎಂದು ಮಕ್ಕಳಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಪೋಲೀಸರು ಕಿವಿಮಾತು ಹೇಳಿದ್ದಾರೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz