ಕುಣಿಗಲ್: ನರೇಗಾ ಯೋಜನೆಯ ಶೇ.40 ಸಾಮಗ್ರಿ ಬಿಲ್ ಪಾವತಿಗೆ ಆಗ್ರಹಿಸಿ ತಾಲ್ಲೂಕಿನ ಚೌಡನಕುಪ್ಪೆ ಗ್ರಾಮ ಪಂಚಾಯಿತಿಯ ಕೆಲ ಸದಸ್ಯರು ಕಚೇರಿಗೆ ಬೀಗ ಹಾಕಿ ಬುಧವಾರ ಪ್ರತಿಭಟನೆ ನಡೆಸಿದರು.
ಚೌಡನಕುಪ್ಪೆ ಗ್ರಾಮ ಪಂಚಾಯಿತಿಯ ಹುಲಿಕಟ್ಟೆ ಸದಸ್ಯೆ ಭಾಗ್ಯಮ್ಮ ಅವರ ಪತಿ ರವಿಕುಮಾರ್ (ಜೆಡಿಎಸ್ ಬೆಂಬಲಿತ) ಮತ್ತು ಸುನೀಲ್ 2021ನೇ ಸಾಲಿನಿಂದ ಈವರೆಗೆ ನರೇಗಾ ಯೋಜನೆಯಲ್ಲಿ ನಡೆಸಿರುವ ಶಾಲಾ ಕಾಂಪೌಂಡ್, ಚರಂಡಿ, ಸಿ.ಸಿ. ರಸ್ತೆ ಇತ್ಯಾದಿ ಕಾಮಗಾರಿಯ ಬಾಪ್ತನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಗೌಡ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳು ನಿಯಮ ಪಾಲನೆ ಮಾಡದೆ ಕಾರ್ಯನಿರ್ವಹಿಸುತ್ತಿದ್ದಾರೆ. ಸಮುದಾಯ ಕಾಮಗಾರಿ ಮತ್ತು ವೈಯುಕ್ತಿಕ ಕಾಮಗಾರಿಗಳ ಸಾಮಾಗ್ರಿ ಬಾಬು ಬಿಡುಗಡೆಯಾಗಿದ್ದರೂ, ಪಾವತಿಗೆ ನಿರಾಕರಿಸಿದ ಕಾರಣ ಗ್ರಾಮಸ್ಥರು ಪರದಾಡುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಚನೆ ನೀಡಿದ್ದರೂ ಪ್ರಯೋಜನವಾಗಿಲ್ಲ. ನೂತನ ಕಚೇರಿ ಉದ್ಘಾಟನೆಗೆ ಸಿದ್ಧವಾಗಿದ್ದು, ಹಳೆ ಕಚೇರಿಯಲ್ಲಿನ ನಿರುಪಯುಕ್ತ ಸಾಮಗ್ರಿಗಳನ್ನು ವಿಲೇವಾರಿ ಮಾಡುವಲ್ಲಿ ಹಾಗೂ ಬೀದಿದೀಪ ಖರೀದಿಯಲ್ಲಿ ನಿಯಮಗಳನ್ನು ಮೀರಿದ್ದಾರೆ ಎಂದು ಆರೋಪಿಸಿದರು.
ಹುಲಿಯೂರುದುರ್ಗ ಪಿಎಸ್ ಐ ಪ್ರಶಾಂತ್ ಭೇಟಿ ನೀಡಿ ಪ್ರತಿಭಟನಕಾರರೊಂದಿಗೆ ಚರ್ಚಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಗೌಡ ನವೆಂಬರ್ 15ರಂದು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸಭೆ ಕರೆದು ತೀರ್ಮಾನ ಮಾಡುವುದಾಗಿ ನೀಡಿದ ಭರವಸೆ ಮೇರೆಗೆ ಪ್ರತಿಭಟನೆ ಕೈಬಿಟ್ಟರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


