ತುಮಕೂರು: ತಾಲೂಕಿನ ಗುಲಗಂಜಿ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉಳಿಸಲು ಎಐಡಿಎಸ್ ಓ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು. ನಮ್ಮೂರ ಶಾಲೆಯನ್ನು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ’ ಎಂದು ಹಳ್ಳಿಯ ಜನರು ಸರ್ಕಾರದ ವಿರುದ್ಧ ಒಕ್ಕೊರಲಿನಿಂದ ಧ್ವನಿಯೆತ್ತಿದರು.
ಪ್ರತಿಭಟನೆಯನ್ನ ಉದ್ದೇಶಿಸಿ ಎಐಡಿಎಸ್ ಓ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ 40,000ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ರಾಜ್ಯ ಸರ್ಕಾರ ಮುಚ್ಚಲು ಮುಂದಾಗಿದೆ. ಈ ಯೋಜನೆ ಭಾಗವಾಗಿ ಗುಬ್ಬಿ ವೀರಣ್ಣನವರು ಕಟ್ಟಿಸಿ ಬೆಳೆಸಿರುವ ಗುಲಗಂಜಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಿ ಸಮುದ್ರನಹಳ್ಳಿ ಮ್ಯಾಗ್ನೆಟ್ ಗೆ ವಿಲೀನ ಮಾಡಲು ಮುಂದಾಗಿದೆ ಈ ನಿರ್ಧಾರವು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದುವರೆದು, ನಿನ್ನೆ ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪರವರು, ಸರ್ಕಾರಿ ಶಾಲೆ ಮುಚ್ಚುವುದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ, ಈ ರೀತಿಯ ಅಪಾದನೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿರುವ ಅಸತ್ಯದಿಂದ ಕೂಡಿದ ವಾದ ಎಂದೂ ಸಹ ಹೇಳಿದ್ದಾರೆ. ಆದರೆ, ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ದಿನಾಂಕ 15, ಅಕ್ಟೋಬರ್ ಹೊರಡಿಸಿದ ಸುತ್ತೋಲೆಯಲ್ಲಿ KPS Magnet ಶಾಲೆಗಳೊಂದಿಗೆ ಸುತ್ತಲಿನ ಕಡಿಮೆ ದಾಖಲಾತಿಯ ಶಾಲೆಗಳನ್ನು ವಿಲೀನಗೊಳಿಸಬೇಕು ಎಂದು ಆದೇಶಿಸಿದೆ. ಅಂತೆಯೇ, KPS ಶಾಲೆಯನ್ನಾಗಿ ಉನ್ನತೀಕರಿಸುತ್ತಿರುವ ಹಲವು ಶಾಲೆಗಳಿಗೆ ಸುತ್ತಲಿನ ಶಾಲೆಗಳನ್ನು ವಿಲೀನಗೊಳಿಸಿಸಬೇಕು ಎಂಬ ಆದೇಶವನ್ನು ಈಗಾಗಲೇ ಗ್ರಾಮ ಪಂಚಾಯಿತಿ ಮಟ್ಟದ ಹಲವು ಶಾಲೆಗಳಿಗೆ ನೀಡಲಾಗಿದೆ. ಅಧಿವೇಶನದಲ್ಲಿ ಸಚಿವರೇ ಹೇಳಿದಂತೆ, ಗ್ರಾಮ ಪಂಚಾಯಿತಿಗೊಂದರಂತೆ KPS Magnet ಶಾಲೆಗಳನ್ನು ತೆರೆಯಲಾಗುತ್ತದೆ, ಅಂದರೆ ತಮ್ಮದೇ ಇಲಾಖೆಯ ಆದೇಶದಂತೆ ಸರ್ಕಾರ ಮುಂದುವರೆಯುತ್ತಿದೆ ಎಂದರು.
ಈಗ ಮೂಡುವ ಪ್ರಶ್ನೆಯೆಂದರೆ, ಸರ್ಕಾರದ ಆದೇಶಗಳು ಹೇಳುವುದೇ ಒಂದು, ಮಂತ್ರಿಗಳ ಹೇಳಿಕೆ ಮತ್ತೊಂದು. ಜನ ಯಾವುದನ್ನು ನಂಬಬೇಕು? ಆದ್ದರಿಂದ, ಕನ್ನಡ ಶಾಲೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂಬ ಸಚಿವರ ಒಳ್ಳೆಯ ಆಶಯ ನಿಜವಾದಲ್ಲಿ, ಈ ಕೂಡಲೇ ರಾಜ್ಯ ಸರ್ಕಾರ ತನ್ನ ಅಕ್ಟೋಬರ್ 15ರ ಆದೇಶದಲ್ಲಿ ನಮೂದಿಸಿರುವ ವಿಲೀನದ ಅಂಶವನ್ನು ಹಿಂಪಡೆಯಲಿ ಜೊತೆಗೆ ವಿಲೀನದ ಹೆಸರಿನಲ್ಲಿ ಕಡಿಮೆ ದಾಖಲಾತಿಯ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಲಿಖಿತ ಆದೇಶ ಹೊರಡಿಸಲಿ ಎಂದು ಎಐಡಿಎಸ್ಓ ಆಗ್ರಹಿಸುತ್ತದೆ ಎಂದು ಹೇಳಿದರು.
ಈ ಶಾಲೆಯು ಗುಬ್ಬಿ ವೀರಣ್ಣನವರು ಕಟ್ಟಿಸಿ ಬೆಳೆಸಿರುವ ಶಾಲೆ, ಈ ಶಾಲೆಯಲ್ಲಿ ಓದಿದವರು ಇಂದು ಉನ್ನತ ಉದ್ಯೋಗಗಳಲ್ಲಿದ್ದಾರೆ. ಸರಿಯಾದ ರಸ್ತೆಯಿಲ್ಲದ ಸಮುದ್ರನಹಳ್ಳಿಗೆ ನಮ್ಮೂರಿನ ಚಿಕ್ಕ ಮಕ್ಕಳನ್ನ ಹೇಗೆ ಕಳಿಸಬೇಕೆಂದು ಪ್ರಶ್ನಿಸಿದರು, ಹಾಗೂ ನಮ್ಮೂರಿನ ಶಾಲೆ ನಮ್ಮ ಹೆಮ್ಮೆ ಅದನ್ನ ನಾವು ಎಂದಿಗೂ ಮುಚ್ಚಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಸರ್ಕಾರದ ಮ್ಯಾಗ್ನೆಟ್ ಯೋಜನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನಂತರ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚಿಸಲಾಯಿತು. ಪ್ರತಿಭಟನೆಯಲ್ಲಿ ಜಿಲ್ಲಾ ಪದಾಧಿಕಾರಿಗಳಾದ ಭರತ್, ಸಂದೀಪ್ ಮತ್ತು ಗ್ರಾಮದ ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


