ತುಮಕೂರು: ಭಾರತ ಸೇವಾದಳ ಜಿಲ್ಲಾ ಹಾಗೂ ತಾಲ್ಲೂಕು ಸಮಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ತುಮಕೂರು ವತಿಯಿಂದ ತಾಲ್ಲೂಕು ಮಟ್ಟದ ಮಕ್ಕಳ ನಾಯಕತ್ವ ತರಬೇತಿ ಶಿಬಿರವನ್ನು ಗುಬ್ಬಿಯ ಸರ್ಕಾರಿ ಬಾಲಕಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್. ನಟರಾಜು ಅವರು ಗಿಡಕ್ಕೆ ನೀರು ಹಾಕುವುದರ ಮೂಲಕ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳು ಶಾಲೆಯಲ್ಲಿ ನಾಯಕ–ನಾಯಕಿಯರಾಗಿ ನಡೆಯಲು ಸೇವಾದಳದ ನಾಯಕತ್ವ ಶಿಬಿರದ ಚಟುವಟಿಕೆಗಳು ವಿದ್ಯಾರ್ಥಿಗಳ ಕಲಿಕಾ ಹಂತ ಹಾಗೂ ತಮ್ಮೆಲ್ಲರ ಮುಂದಿನ ಜೀವನಕ್ಕೆ ಪೂರಕವಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಬಿ.ಜಿ. ವೆಂಕಟೇಗೌಡ ಮಾತನಾಡಿ, ಮಕ್ಕಳಲ್ಲಿ ಸೇವಾ ಮನೋಭಾವನೆಯೊಂದಿಗೆ ಮಾನವೀಯ ಮೌಲ್ಯಗಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಗುಬ್ಬಿ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸಿ. ರಮೇಶ್ ಮಕ್ಕಳನ್ನು ಕುರಿತು ಮಾತನಾಡಿ, ಗುರು ಹಿರಿಯರನ್ನು, ರಾಷ್ಟ್ರಧ್ವಜ, ರಾಷ್ಟ್ರಗೀತೆಗಳನ್ನು ಗೌರವಿಸಬೇಕು. ದೇಶ ಪ್ರೇಮವನ್ನು ಬೆಳೆಸಿಕೊಳ್ಳುವುದರಿಂದ ದೇಶದ ನಾಗರಿಕನಾಗಲು ಸಾಧ್ಯ ಎಂದರು.
ಜಿಲ್ಲಾ ಉಪಾಧ್ಯಕ್ಷರಾದ ಜಿ. ವೆಂಕಟೇಶ್ ಮಾತನಾಡಿ, ಸೇವಾದಳದ ಚಟುವಟಿಕೆಗಳಿಂದ ಜೀವನದಲ್ಲಿ ಶಿಸ್ತು, ಸಂಯಮ, ದೇಶಭಕ್ತಿ ಹಾಗೂ ಸೇವೆಯಂತಹ ಗುಣಗಳು ಸೇವಾದಳದ ಶಿಕ್ಷಣದಲ್ಲಿ ಮಾತ್ರ ಸಿಗಲು ಸಾಧ್ಯ ಎಂದರು.
ಜಿಲ್ಲಾ ಕಾರ್ಯದರ್ಶಿ ಹೆಚ್. ಎಸ್. ಕೃಷ್ಣಮೂರ್ತಿ ಮಾತನಾಡಿ, ಮಕ್ಕಳ ನಾಯಕತ್ವ ಶಿಬಿರದಲ್ಲಿ ಪ್ರತಿದಿನದ ವೇಳಾಪಟ್ಟಿಯಂತೆ ಕಾರ್ಯ ಚಟುವಟಿಕೆಗಳು ನಡೆಯಲಿದ್ದು, ಸಂಪನ್ಮೂಲ ವ್ಯಕ್ತಿಗಳಿಂದ ಶಿಬಿರದಲ್ಲಿ ನೀಡುವ ಮಾಹಿತಿಯನ್ನು ಪಡೆದು ದೇಶದ ಉತ್ತಮ ಪ್ರಜೆಗಳಾಗಿ ಎಂದು ಹೇಳಿದರು.
ಜಿಲ್ಲಾ ಸಂಘಟಕರಾದ ಎಸ್. ಶಿವರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಶಾಲೆಯ ಎಸ್. ಡಿ .ಎಂ. ಸಿ. ಉಪಾಧ್ಯಕ್ಷ ಕೃಷ್ಣಮೂರ್ತಿ, ಹಿರಿಯ ಸಹ ಶಿಕ್ಷಕಿ ದೇವಿಕಾ, ಶಾಖಾನಾಯಕ ದಕ್ಷಿಣಮೂರ್ತಿ, ಗುರುಪ್ರಸಾದ್, ಸುಮಂಗಲ, ಈರಮ್ಮ, ಜ್ಞಾನಜ್ಯೋತಿ, ಶಕುಂತಲಮ್ಮ ಹಾಗೂ ತಾಲೂಕಿನ ವಿವಿಧ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx