ತುಮಕೂರು: ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಇಂದು ಅಧಿಕಾರಿಗಳ ತಂಡದೊಂದಿಗೆ ಬುಗುಡನಹಳ್ಳಿ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರಕ್ಕೆ ಪ್ರಮುಖ ನೀರಿನ ಮೂಲವಾಗಿರುವ ಬುಗುಡನಹಳ್ಳಿ ಕೆರೆಯಲ್ಲಿ ಪ್ರಸ್ತುತ ಇರುವ ನೀರಿನ ಸಂಗ್ರಹದ ಬಗ್ಗೆ ಖುದ್ದು ಮಾಹಿತಿ ಪಡೆದ ಸಚಿವರು, ಲಭ್ಯವಿರುವ ನೀರು ಇನ್ನೂ ಎಷ್ಟು ದಿನಗಳ ಕಾಲ ಪೂರೈಕೆಗೆ ಸಾಕಾಗುತ್ತದೆ ಎಂಬುದನ್ನು ಅಧಿಕಾರಿಗಳಿಂದ ಕೇಳಿ ತಿಳಿದುಕೊಂಡರು.
ತುಮಕೂರು ನಗರದಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗದಂತೆ ತಡೆಯಲು ಸಚಿವರು ತಕ್ಷಣದ ಕ್ರಮ ಕೈಗೊಂಡಿದ್ದಾರೆ. ಈ ಕುರಿತು ಮಾತನಾಡಿದ ಅವರು, “ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರಿಗೆ ಖುದ್ದು ಕರೆ ಮಾಡಿ ಮಾತನಾಡಿದ್ದೇನೆ. ಹೇಮಾವತಿ ಜಲಾಶಯದಿಂದ ಕೂಡಲೇ ನೀರು ಹರಿಸುವ ಕುರಿತು ಸಮಾಲೋಚನೆ ನಡೆಸಲಾಗಿದ್ದು, ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ,” ಎಂದು ತಿಳಿಸಿದರು.
ಕೆರೆ ಪರಿಶೀಲನೆಯ ನಂತರ ಅಧಿಕಾರಿಗಳೊಂದಿಗೆ ಮಾತನಾಡಿದ ಸಚಿವರು, ನಗರದ ಸಾರ್ವಜನಿಕರಿಗೆ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ತೊಂದರೆಯಾಗಬಾರದು. ಲಭ್ಯವಿರುವ ನೀರನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಮತ್ತು ಹೇಮಾವತಿ ನೀರು ಬಂದ ತಕ್ಷಣ ಕೆರೆ ಭರ್ತಿ ಮಾಡಲು ಸಿದ್ಧತೆ ಮಾಡಿಕೊಳ್ಳಬೇಕೆಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಬಿ.ವಿ. ಅಶ್ವಿಜ, ಮಹಾನಗರ ಪಾಲಿಕೆ ಆಯುಕ್ತೆ ಶುಭ ಹಾಗೂ ವಿವಿಧ ಇಲಾಖೆಗಳ ಇಂಜಿನಿಯರ್ ಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


