ತುಮಕೂರು: ಜಿಲ್ಲೆಯಲ್ಲಿ ಹಕ್ಕಿಜ್ವರ (H5N1)ನಿಂದ ರಾಷ್ಟ್ರಪಕ್ಷಿ ನವಿಲುಗಳ ಸರಣಿ ಸಾವು ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದೆ. ಕೋಳಿಹಳ್ಳಿ ಬಳಿಕ ಈಗ ದೇವರಾಯನದುರ್ಗದ ತಪ್ಪಲು, ಕುಣಿಗಲ್ ಹಾಗೂ ಹಿರೇಹಳ್ಳಿ ಸೇರಿದಂತೆ ವಿವಿಧೆಡೆ ನವಿಲುಗಳು ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಈವರೆಗೆ ಬಲಿಯಾದ ನವಿಲುಗಳ ಸಂಖ್ಯೆ 54ಕ್ಕೆ ಏರಿಕೆಯಾಗಿದೆ.
ಏಪ್ರಿಲ್ 16ರಂದು ಕೋಳಿಹಳ್ಳಿಯಲ್ಲಿ ಮೃತಪಟ್ಟ ನವಿಲುಗಳ ಅಂಗಾಂಶ ಮಾದರಿಯನ್ನು ಭೋಪಾಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಏಪ್ರಿಲ್ 30ರಂದು ಬಂದ ವರದಿಯಲ್ಲಿ ನವಿಲುಗಳ ಸಾವಿಗೆ ‘ಹಕ್ಕಿಜ್ವರ’ ಕಾರಣ ಎಂಬುದು ದೃಢಪಟ್ಟಿದೆ.
ಮೇ 5ರಂದು ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಹಿಂಭಾಗ 6, ದೇವರಾಯನದುರ್ಗದ ದುರ್ಗದಹಳ್ಳಿ ಅರಣ್ಯದಲ್ಲಿ 2, ಕೆಸರಮಡು ಬಳಿ 1 ಹಾಗೂ ಕುಣಿಗಲ್ ಸ್ಟಡ್ ಫಾರಂ ಸಮೀಪ 1 ನವಿಲು ಮೃತಪಟ್ಟಿರುವುದು ವರದಿಯಾಗಿದೆ.
ಸೋಂಕು ಕಾಣಿಸಿಕೊಂಡ ಕೋಳಿಹಳ್ಳಿ ಸುತ್ತಮುತ್ತಲಿನ 10 ಕಿ.ಮೀ ಪ್ರದೇಶವನ್ನು ಜಿಲ್ಲಾಡಳಿತವು ‘ತೀವ್ರ ನಿಗಾ ಪ್ರದೇಶ’ ಎಂದು ಘೋಷಿಸಿದೆ.
ಪಶುಪಾಲನಾ ಇಲಾಖೆ ಉಪನಿರ್ದೇಶಕರಾದ ಡಾ. ಶಿವಕುಮಾರ್ ಮಾತನಾಡಿ, “ಜಿಲ್ಲಾಧಿಕಾರಿಗಳು ರಚಿಸಿರುವ ತುರ್ತು ಸ್ಪಂದನಾ ತಂಡವು ಮೃತ ಪಕ್ಷಿಗಳ ವಿಲೇವಾರಿಗೆ ಕ್ರಮ ವಹಿಸಿದೆ. 5 ಅಡಿ ಆಳದ ಗುಂಡಿ ತೆಗೆದು, ಸುಣ್ಣ ಹಾಕಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ. ಸದ್ಯಕ್ಕೆ ಈ ಸೋಂಕು ಕೋಳಿಗಳಿಗಾಗಲಿ ಅಥವಾ ಬೇರೆ ಪ್ರಾಣಿಗಳಿಗಾಗಲಿ ಹರಡಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ,” ಎಂದು ತಿಳಿಸಿದ್ದಾರೆ.
ಗೂಳರಿವೆ ಗ್ರಾಮದ ಬಳಿ ಸತ್ತ ನವಿಲುಗಳ ಮಾಂಸವನ್ನು ನಾಯಿಗಳು ಎಳೆದೊಯ್ಯುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಇದರಿಂದ ಮನುಷ್ಯರಿಗೂ ರೋಗ ಹಬ್ಬುವ ಸಾಧ್ಯತೆ ಇದೆ ಎಂದು ಸ್ಥಳೀಯರು ದೂರಿದ್ದಾರೆ. ಅಲ್ಲದೆ, ನಗರಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ನವಿಲುಗಳು ಹೆಚ್ಚಾಗಿ ಸಂಚರಿಸುವುದರಿಂದ, ನಗರ ಪ್ರದೇಶಗಳಿಗೂ ಸೋಂಕು ಹರಡುವ ಭೀತಿ ಎದುರಾಗಿದೆ.
ಮುನ್ನೆಚ್ಚರಿಕೆ ವಹಿಸಿ:
- ಯಾವುದೇ ಸತ್ತ ಅಥವಾ ಅಸ್ವಸ್ಥಗೊಂಡ ಪಕ್ಷಿಗಳನ್ನು ಕೈಯಿಂದ ಮುಟ್ಟಬಾರದು.
- ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿದ ನಂತರವೇ ಸೇವಿಸಬೇಕು.
- ಪಕ್ಷಿಗಳು ಅಸಹಜವಾಗಿ ಮೃತಪಟ್ಟಿರುವುದು ಕಂಡುಬಂದಲ್ಲಿ ತಕ್ಷಣವೇ ಇಲಾಖೆಗೆ ಮಾಹಿತಿ ನೀಡಬೇಕು.
ಕರ್ನಾಟಕದಲ್ಲಿ ಮೊದಲ ಬಾರಿಗೆ ಕಾಡುಪಕ್ಷಿಗಳಲ್ಲಿ H5N1 ಸೋಂಕು ತುಮಕೂರಿನಲ್ಲಿ ದೃಢಪಟ್ಟಿದ್ದು, ಅರಣ್ಯ ಮತ್ತು ಆರೋಗ್ಯ ಇಲಾಖೆಗಳು ತೀವ್ರ ಕಟ್ಟೆಚ್ಚರ ವಹಿಸಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


