ತುಮಕೂರು: ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಇಂದು ನಾಮಪತ್ರ ಸಲ್ಲಿಸಲಾಯಿತು. ನಗರದ ಟೌನ್ ಹಾಲ್ ನಿಂದ ಮೆರವಣಿಗೆಯಲ್ಲಿ ತೆರಳಿ ಎಸ್ ಯುಸಿಐ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ, ರೈತರು,ಕಾರ್ಮಿಕರು ದುಡಿಯುವ ಜನಗಳ ಸಮಸ್ಯೆಗಳ ಧ್ವನಿಯನ್ನು ಸಂಸತ್ತಿನಲ್ಲಿ ಚರ್ಚಿಸಲು ಎಸ್.ಎನ್.ಸ್ವಾಮಿಯವರನ್ನು ಬೆಂಬಲಿಸಿ, ಎಸ್‌ಯುಸಿಐ ಪಕ್ಷವನ್ನು ಬಲಪಡಿಸಿ ಎಂಬ ಘೋಷಣೆಗಳೊಂದಿಗೆ ಕಾರ್ಯಕರ್ತರು ಕೂಗುತ್ತ ಮೆರವಣಿಗೆ ನಡೆಸಿದರು.
ಮೆರವಣಿಗೆಗೆ ಮುಂಚೆ ಮಾತನಾಡಿದ ಅಭ್ಯರ್ಥಿ ಎಸ್.ಎನ್.ಸ್ವಾಮಿ, ಸಮಾಜದಲ್ಲಿ ಬಡವರು ಶ್ರೀಮಂತರ ನಡುವಿನ ಅಂತರ ಹೆಚ್ಚುತ್ತಿದೆ. ನಮ್ಮನ್ನು ಆಳುತ್ತಿರುವ ಪಕ್ಷಗಳು ಬಂಡವಾಳ ಶಾಹಿಗಳ ಶ್ರೀಮಂತ ಮನೆತನಗಳ ಲಾಭವನ್ನು ಹೆಚ್ಚಿಸುತ್ತಿವೆ. ದೇಶದಲ್ಲಿ ಜನರು ಬೆಲೆ ಏರಿಕೆ ನಿರುದ್ಯೋಗದಂಥ ಸಮಸ್ಯೆಗಳನ್ನು ತೀರ್ವವಾಗಿ ಎದುರಿಸುತ್ತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಎಡಪಂಥೀಯ ಸಿಪಿಐ, ಸಿಪಿಐಎಂ ಪಕ್ಷಗಳು ಕೆಲವೊಂದು ಸೀಟುಗಳ ಲಾಭಕ್ಕಾಗಿ ಚುನಾವಣಾ ರಾಜಕೀಯದಲ್ಲಿ ಮುಳುಗಿವೆ. ಕಮ್ಯುನಿಸ್ಟ್ ವಿಚಾರಕ್ಕೆ ಕಾರ್ಮಿಕರನ್ನು ಸಜ್ಜುಗೊಳಿಸಬೇಕಾಗಿದ್ದ ಆ ಪಕ್ಷಗಳು ಇಂಡಿಯಾ ಮೈತ್ರಿ ಕೂಟಕ್ಕೆ ಬೆಂಬಲ ಸೂಚಿಸಿವೆ. ಆದ್ದರಿಂದ ಈ ಚುನಾವಣೆಯಲ್ಲಿ ನಮ್ಮ ಪಕ್ಷವು ತನ್ನ ಶಕ್ತಿ ಸಾಮಥ್ಯಕ್ಕೆ ತಕ್ಕಂತೆ ಬಲವಾದ ಪರಿಣಾಮ ಬೀರಲು ಏಕಾಂಗಿಯಾಗಿ 19 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ. ತುಮಕೂರು ಲೋಕಸಭಾ ಕ್ಷೇತ್ರದಿಂದ ನನ್ನನ್ನು ನಿಲ್ಲಿಸಿದ್ದು ಪ್ರಜ್ಞಾವಂತ, ವಿಚಾರಂತ ದುಡಿಯುವ ಜನರು ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತಹಾಕಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಮೆರವಣಿಗೆ ಮಧ್ಯೆ ಅವರು ಸ್ವಾತಂತ್ರ ಚೌಕದಲ್ಲಿನ ಹುತಾತ್ಮರ ಸ್ಥಂಭಕ್ಕೆ ಮಾಲಾರ್ಪಣೆ ಮಾಡಿ ಸ್ವಾತಂತ್ರ ಹೋರಾಟಗಾರರ ಕನಸನ್ನು ನನಸು ಮಾಡುವುದು ಅವರ ಆಶಯಗಳನ್ನು ಪೂರ್ಣಗೊಳಿಸಲು ಮತ್ತು ನಮ್ಮ ಪಕ್ಷವು ದುಡಿಯುವ ಜನರ ಸರ್ವಾಧಿಕಾರವನ್ನು ತರಲು ಶ್ರಮಿಸುತ್ತದೆ ಎಂದು ತಿಳಿಸಿದರು.
ಪಕ್ಷ ರಾಜ್ಯ ನಾಯಕರಾದ ಕೆ.ವಿ.ಭಟ್ ಅವರು ಅಭ್ಯರ್ಥಿಗೆ ಶುಭಕೋರಿ ಮಾತನಾಡಿ, ನಮ್ಮ ಪಕ್ಷವು ಜನರ ಸಮಸ್ಯೆಗಳ ಬಗ್ಗೆ ಹೋರಾಟ ಕಟ್ಟುತ್ತಿದೆ. ಜನರ ನಡುವೆ ಇದ್ದು ಹಲವಾರು ಚಳುವಳಿಗೆ ನಾಯಕತ್ವ ನೀಡಿ ತುಮಕೂರಿನಲ್ಲಿ ಪಕ್ಷದ ಜವಾಬ್ದಾರಿ ಹೊತ್ತಿರುವ ಎಸ್.ಎನ್. ಸ್ವಾಮಿಯವರು ಜನರ ನೈಜ ಸಮಸ್ಯೆಗಳಿಗೆ ಸ್ಪಂದಿಸುವವರು. ಅವರು ಸೂಕ್ತವಾದ ಅಭ್ಯರ್ಥಿಯಾಗಿದ್ದಾರೆ. ತುಮಕೂರಿನ ನಾಕರಿಕರು ಅವರನ್ನು ಬೆಂಬಲಿಸುವ ಮೂಲಕ ಗೆಲ್ಲಿಸಬೇಕೆಂದು ಹೇಳಿದರು.
ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಲೋಕಸಭಾ ಚುನಾವಣಾಧಿಕಾರಿಗಳಾದ ಶುಭ ಕಲ್ಯಾಣ್ ಅವರಿಗೆ ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಎಸ್.ಎನ್.ಸ್ವಾಮಿಯವರು ನಾಮ ಪತ್ರ ಸಲ್ಲಿಸಿದರು.
ಪಕ್ಷದ ರಾಜ್ಯ ನಾಯಕರಾದ ಹೆಚ್.ಪಿ.ಶಿವಪ್ರಕಾಶ್, ತುಮಕೂರು ಸಂಘಟನಾ ಸಮಿತಿಯ ಸದಸ್ಯರಾದ ಎಂ.ವಿ.ಕಲ್ಯಾಣಿ, ಮಂಜುಳ ಗೋನವಾರ, ಲೋಕೇಶ್ ಭೈರನಾಯಕನಹಳ್ಳಿ, ರತ್ನಮ್ಮ, ಅಶ್ವಿನಿ, ಪಾರ್ವತಮ್ಮ, ಪ್ರವೀಣ್, ಅಣ್ಣಪ್ಪ, ಪ್ರಶಾಂತ್, ಸೇರಿದಂತೆ ಹಲವಾರು ಜನ ಪಕ್ಷದ ಬೆಂಬಲಿಗರು ನಾಮಪತ್ರ ಸಲ್ಲಿಸುವ ಕಾರ್ಯಕ್ಕೆ ಸಾಕ್ಷಿಯಾದರು.
ಪ್ರಚಾರಕ್ಕೆ ಚಾಲನೆ:
SUCI ಕಮ್ಯುನಿಸ್ಟ್ ಪಕ್ಷದ ತುಮಕೂರು ಲೋಕಸಭಾ ಕ್ಷೇತ್ರ ಪ್ರಚಾರಕ್ಕೆ ರಾಜ್ಯ ಸಮಿತಿ ಸೆಕ್ರೆಟರಿ ಸದಸ್ಯರಾದ ಕಾಮ್ರೆಡ್ ಎಂ.ಶಶಿಧರ್ ರವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಭ್ಯರ್ಥಿಯಾದ ಎಸ್ ಎನ್ ಸ್ವಾಮಿರವರು ಉಪಸ್ಥಿತರಿದ್ದರು.
ಬಳಿಕ ಮಾತನಾಡಿದ ಅವರು, ಎಲ್ಲಾ ಬಂಡವಾಳಶಾಹಿ ಪಕ್ಷಗಳನ್ನು ಸೋಲಿಸಿ ರೈತ ಕಾರ್ಮಿಕರ ಪಕ್ಷವಾದ ಎಸ್ ಯು ಸಿ ಐ ಪಕ್ಷದ ಅಭ್ಯರ್ಥಿಯಾದ ಎಸ್.ಎನ್. ಸ್ವಾಮಿಯವರನ್ನು ಚುನಾಯಿಸಿ ಗೆಲ್ಲಿಸುವ ಮೂಲಕ ಹೋರಾಟ ಪರ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು. ಪಕ್ಷದ ಸದಸ್ಯರು ಬೆಂಬಲಿಗರು ಈ ಸಂದರ್ಭದಲ್ಲಿ ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296