ತುಮಕೂರು: ನೇರಳೆಹಣ್ಣು ಕೀಳಲು ಹೋದ ಒಂದೇ ಕುಟುಂಬದ ಮೂವರು ಮಕ್ಕಳು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಪಾವಗಡ ತಾಲ್ಲೂಕಿನ ನಾರೆನಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಮಕ್ಕಳನ್ನು ನಾರೆನಾಗೇನಹಳ್ಳಿ ಗ್ರಾಮದ ಕಲ್ಪನ ಹಾಗೂ ಅಜಯ್ ರೆಡ್ಡಿ ಎಂಬುವರ ಮಕ್ಕಳಾದ ಸುಗುಣಕರರೆಡ್ಡಿ (10), ಧನುಷ್ ರೆಡ್ಡಿ (8) ಹಾಗೂ ದೇವಿ ಅವರ ಪುತ್ರನಾದ ಸುದರ್ಶನರೆಡ್ಡಿ (10) ಎಂದು ಗುರುತಿಸಲಾಗಿದೆ.
ಈ ಚಿಕ್ಕ ಮಕ್ಕಳು ಮಧ್ಯಾಹ್ನದ ವೇಳೆ ಗ್ರಾಮದ ಸಮೀಪವಿರುವ ತೋಟವೊಂದರಲ್ಲಿ ನೇರಳೆ ಮರಗಳ ಬಳಿ ಹೋಗಿದ್ದಾರೆ. ಮರದಲ್ಲಿದ್ದ ಹಣ್ಣು ತಿಂದ ಬಳಿಕ ನೀರು ಕುಡಿಯಲು ಶೇಖರಣೆ ಮಾಡಿದ್ದ ವಾಟರ್ ಟ್ಯಾಂಕ್ ಬಳಿ ಹೋಗಿ ಅಲ್ಲಿ ಕಾಲು ಜಾರಿ ವಾಟರ್ ಟ್ಯಾಂಕ್ ನೊಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.
ಈ ಮೂವರು ಮಕ್ಕಳ ಸುದ್ದಿ ತಿಳಿದ ಗ್ರಾಮಸ್ಥರು ಮಕ್ಕಳ ಮುಖವನ್ನು ನೋಡಿ ಕಣ್ಣೀರಿಟ್ಟರು. ಇನ್ನು ಮಕ್ಕಳ ಹೆತ್ತ ತಂದೆ ತಾಯಿಗಳ ಗೋಳು ಹೇಳತೀರದಾಗಿತ್ತು. ಈ ಬಗ್ಗೆ ರೊದ್ದಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಗಳ ಡಿಕ್ಕಿ ಸಾವು: ಎರಡು ದ್ವಿಚಕ್ರ ವಾಹನಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಿಂದಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ದಾವಣಗೆರೆ ಕೆಜಿಟಿ ನಗರದ ಜಿ.ವೀರಾರೆಡ್ಡಿ (64) ಎಂದು ಗುರುತಿಸಲಾಗಿದೆ. ಮೃತರು ಪಾವಗಡ ಪಟ್ಟಣದ ಚಳ್ಳಕೆರೆ ಕ್ರಾಸ್ ಕಡೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಮತ್ತೊಂದು ಬೈಕ್ ಡಿಕ್ಕಿಯಾಗಿದೆ. ತೀವ್ರವಾಗಿ ಗಾಯಗೊಂಡ ವೀರಾರೆಡ್ಡಿ ಅವರನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿ ಅಲ್ಲಿ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿರುತ್ತಾರೆ.
ಆಟೋ ಚಾಲಕ ಸಾವು: ಪಾವಗಡ ತಾಲ್ಲೂಕು ಸಿ.ಕೆ.ಪುರ ಬಳಿ ಆಟೋ ಪಲ್ಟಿಯಾದ್ದರಿಂದ ಆಟೋ ಚಾಲಕ ಹನುಮಂತು (40) ಎಂಬುವರು ಮೃತಪಟ್ಟಿರುತ್ತಾರೆ. ಗುಡಿಬಂಡೆ ಮಂಡಲನ ಎನ್.ಆರ್. ರೊಪ್ಪದವರು ಎಂದು ತಿಳಿದು ಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


