ತುಮಕೂರು: ಲೋಕಚರಿತ ರಂಗಕೇಂದ್ರ (ರಿ) ಚಿಕ್ಕದಾಳವಟ್ಟ ಮತ್ತು ಸಮ್ಮತ ಥೀಯೇಟರ್ (ರಿ) ಆಯೋಜಿಸುವ ನಾಟಕ ‘ತಿಂಡಿಗೆ ಬಂದ ತುಂಡೇರಾಯ ‘ ಜನವರಿ 28ರಂದು ತುಮಕೂರಿನ ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ 6 ಗಂಟೆಗೆ ನಡೆಯಲಿದೆ.
ಬರ್ಟೋಲ್ಟ್ ಬ್ರೆಕ್ಟ್ ರಚನೆಯ ಈ ನಾಟಕವನ್ನು ಶಕೀಲ್ ಅಹಮ್ಮದ್ ನಿರ್ದೇಶಿಸಿದ್ದಾರೆ. ಅನುಷ್ ಶೆಟ್ಟಿ, ಮುನ್ನ ಮೈಸೂರು ಸಂಗೀತ ನೀಡಿದ್ದಾರೆ. ರಂಗ ವಿನ್ಯಾಸ / ವಸ್ತ್ರ ವಿನ್ಯಾಸವನ್ನು ಶ್ವೇತಾ ರಾಣಿ ಎಚ್. ಕೆ. ಮಾಡಲಿದ್ದಾರೆ.
ಶಕೀಲ್ ಅಹ್ಮದ್ : ಲೋಣಿ ಬಿ.ಕೆ. (ಬಿಜಾಪೂರ) ಊರಿನವರಾದ ಶಕೀಲ್ ಅಹ್ಮದ್, ಸಾಂಪ್ರದಾಯಿಕ ಮತ್ತು ಸಮಕಾಲೀನ ರಂಗಭೂಮಿಯ ತಂತ್ರಗಳನ್ನು ಬೆಸೆಯುವುದರ ಮೂಲಕ ತಮ್ಮದೇ ಆದ ರಂಗ ತರಬೇತಿಯನ್ನು ಸೃಷ್ಟಿಸಿದ್ದಾರೆ. ನೀನಾಸಂ ಹಾಗೂ ಸಿಂಗಾಪೂರಿನ ಇಂಟರ್ ಕಲ್ಟರ್ ಥಿಯೇಟರ್ ಇನ್ಸಿಟ್ಯೂಟ್ (ಐ.ಟಿ.ಐ) ನಲ್ಲಿ ಅಭಿನಯ ಕುರಿತು ತರಬೇತಿ ಪಡೆದಿರುತ್ತಾರೆ.
“ಜನಮನದಾಟ” ತಂಡದಲ್ಲಿ ನಟರಾಗಿ, ಕರ್ನಾಟಕದ ಹಲವು ತಂಡಗಳಲ್ಲಿ ನಟ ಹಾಗೂ ತರಬೇತುದಾರರಾಗಿ ಮತ್ತು ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಇವರ ನಿರ್ದೇಶನದ ನಾಟಕಗಳು-ಉಳಿದ ದೇಹಗಳು, ರೇಖೆಗಳು, ಮದುವೆ ಹೆಣ್ಣು, ಉಳಿದ ಸಾಕ್ಷಿಗಳು, ಅಪರಿಚಿತ ಘಳಿಗೆ, ಫಾರ್ ಎ ಬೈಟ್ ಆಫ್ ಫೂಡ್ ಹಾಗೂ ಆನಾಮಿಕನ ಸಾವು.
ನಾಟಕದ ಕುರಿತು:
ತಿಂಡಿಗೆ ಬಂದ ತುಂಡೇರಾಯ ಜರ್ಮನ್ ನಾಟಕಕಾರ ಬರ್ಟೋಲ್ಟ್ ಬ್ರೆಕ್ಟ್ ಅವರ “The resistible rise of Arthuro Ui” ನಾಟಕವನ್ನು ಆಧರಿಸಿದೆ. ಅದು ಎರಡನೇಯ ವಿಶ್ವಯುದ್ದಕ್ಕೂ ಮೊದಲು. ಜರ್ಮನಿಯಲ್ಲಿ. ಅಡಾಲ್ಫ್ ಹಿಟ್ಲರ್ ಮತ್ತು ನಾಝಿ ಪಕ್ಷದ ಬೆಳವಣಿಗೆಯ ಸಂಕೇತವಾಗಿ ಹುಟ್ಟಿದ ವಿಡಂಬನಾತ್ಮಕ ನಾಟಕ. ಈ ನಾಟಕದ ಎಲ್ಲಾ ಪಾತ್ರಗಳು ಹಾಗೂ ಘಟನೆಗಳು, ನಾಝಿ ಜರ್ಮನಿಯ ಇತಿಹಾಸದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿದೆ.
ಸಣ್ಣಪುಟ್ಟ ಕೊಲೆ, ಸುಲಿಗೆ, ದರೋಡೆ ಮಾಡಿಕೊಂಡು ಬದುಕಿದ್ದ ತುಂಡೇರಾಯನ ಹೆಸರು, ರಾಜ್ಯದ ಆರ್ಥಿಕ ಸಂಕಷ್ಟದಿಂದಾಗಿ, ಸಮಾಜದ ಭಯರಹಿತ ವಾತಾವರಣದಿಂದಾಗಿ, ಜನರ ಮನಸ್ಸಿನಿಂದ ಮರೆಯಾಗಲಾರಂಬಿಸುತ್ತದೆ. ಸರ್ಕಾರದ ಆಸ್ತಿಯನ್ನು ಖಾಸಗೀಕರಣಗೊಳಿಸುವುದರಲ್ಲಿ ಲಂಚ ಪಡೆದ ಬ್ರಷ್ಟ ರಾಜಕಾರಣಿಯ ಕಥೆ ಕಿವಿಗೆ ಬೀಳುತ್ತಿದ್ದಂತೆ, ಅವನ ಮಹತ್ವಾಕಾಂಕ್ಷೆಯ ಕನಸಿಗೆ ರೆಕ್ಕೆ ಮೂಡಲಾರಂಭಿಸುತ್ತದೆ. ಇದನ್ನೇ ಮೆಟ್ಟಿಲನ್ನಾಗಿಸಿಕೊಳ್ಳುವ ತುಂಡೇರಾಯ ತನ್ನದೇ ಆದ ಪ್ರತ್ಯೇಕ ಗುಂಪು ಕಟ್ಟಿಕೊಂಡು, ದೊಂಬಿ-ಗಲಭೆಗಳನ್ನು ಸೃಷ್ಟಿಸುತ್ತಾ ತನ್ನ ಬುದ್ದಿ ಹಾಗೂ ಬಲಪ್ರಯೋಗದಿಂದ ಅಧಿಕಾರ ಗದ್ದುಗೆ ಹಿಡಿಯುತ್ತಾನೆ. ದುರಾಸೆ ಮತ್ತು ಅಧಿಕಾರ ದಾಹ ಹೆಚ್ಚಾದಂತೆ ಅದನ್ನು ಸಾಧಿಸುವ ಮಾರ್ಗ ಇನ್ನೂ ಹೆಚ್ಚು ಹೆಚ್ಚು ಕ್ರೂರವಾಗುತ್ತಾ ಹೋಗುತ್ತದೆ. ಜನರನ್ನು ಮರುಳು ಮಾಡುತ್ತಾ, ಮರುಳಾಗದ್ದವರನ್ನು ಕೊಲ್ಲುತ್ತಾ, ಒಂದಾದ ಮೇಲೊಂದರಂತೆ ಎಲ್ಲಾ ರಾಜ್ಯಗಳನ್ನು ಕಬಳಿಸುತ್ತಾ, ಅನಭಿಷಿಕ್ತ ದೊರೆಯಾಗಿ ಮೆರೆಯುತ್ತಾನೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4