ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಅರೇಮಲ್ಲೇನಹಳ್ಳಿಯಲ್ಲಿ ಜಾನುವಾರುಗಳನ್ನು ಕರೆತರಲು ಹೋದ ಮಹಿಳೆಯೊಬ್ಬರು ಚಿರತೆ ದಾಳಿಗೆ ಬಲಿಯಾಗಿರುವುದು ಇಡೀ ತಾಲ್ಲೂಕಿನಲ್ಲಿ ಸಂಚಲನ ಮೂಡಿಸಿದೆ. ಈ ಭಾಗದಲ್ಲಿ ಚಿರತೆ ದಾಳಿಯಿಂದ ಸಂಭವಿಸಿದ ಮೊದಲ ಸಾವು ಇದಾಗಿದ್ದು, ಗ್ರಾಮಸ್ಥರು ತೋಟಗಳಿಗೆ ತೆರಳಲು ಮತ್ತು ಮನೆಯಿಂದ ಹೊರಬರಲು ಭಯಪಡುವಂತಾಗಿದೆ.
ಘಟನೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮತ್ತು ಶಾಸಕ ಎಂ.ಟಿ. ಕೃಷ್ಣಪ್ಪ ಅವರು ಮೃತ ಮಹಿಳೆಯ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. ಸರ್ಕಾರದಿಂದ ₹5 ಲಕ್ಷ ಪರಿಹಾರದ ಚೆಕ್ ವಿತರಿಸಿದ ಅವರು, ಬಾಕಿ ₹15 ಲಕ್ಷವನ್ನು ಶೀಘ್ರವಾಗಿ ನೀಡುವುದಾಗಿ ಭರವಸೆ ನೀಡಿದರು. ಅಲ್ಲದೆ, ಮೃತ ಮಹಿಳೆಯ ಮಗನ ಶಿಕ್ಷಣಕ್ಕೆ ಮಾಸಿಕ ₹4,000 ಧನಸಹಾಯ ಮತ್ತು ಮಗಳಿಗೆ ಕಂಪ್ಯೂಟರ್ ಆಪರೇಟರ್ ಕೆಲಸ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ.
ಅರಣ್ಯ ಇಲಾಖೆಯು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಮಂಗಳವಾರ ಸಂಜೆ ಮೂರು ವರ್ಷದ ಗಂಡು ಚಿರತೆಯನ್ನು ಬೋನಿನಲ್ಲಿ ಸೆರೆಹಿಡಿಯಲಾಗಿದೆ. ಆದರೂ, ಇನ್ನೂ ಒಂದು ಹೆಣ್ಣು ಚಿರತೆ ಮತ್ತು ಎರಡು ಮರಿಗಳು ಆಸುಪಾಸಿನಲ್ಲಿ ಇರುವ ಸಾಧ್ಯತೆ ಇರುವುದರಿಂದ ಹತ್ತಾರು ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಅರಣ್ಯ ಇಲಾಖೆ ಮತ್ತು ಪೊಲೀಸರು ಧ್ವನಿವರ್ಧಕಗಳ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ. ಸಂಜೆ ವೇಳೆ ಒಬ್ಬಂಟಿಯಾಗಿ ಓಡಾಡಬಾರದು ಮತ್ತು ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಪೋಷಕರು ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ. ಚಿರತೆ ಕಂಡುಬಂದಲ್ಲಿ ಮಾಹಿತಿ ನೀಡಲು ಜಿಲ್ಲಾಡಳಿತ ಸಹಾಯವಾಣಿಯನ್ನು (7304975519) ತೆರೆದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


