ತುರುವೇಕೆರೆ: ಕನ್ನಡದ ಕಣ್ವ ಎಂಬ ಬಿರುದಾಂಕಿತ ಬಿ.ಎಂ.ಶ್ರೀಕಂಠಯ್ಯ ಸ್ಮರಣಾರ್ಥ ತಾಲ್ಲೂಕಿನ ಸಂಪಿಗೆ ಗ್ರಾಮದಲ್ಲಿ ನಿರ್ಮಾಣವಾಗಿರುವ ಬಿಎಂಶ್ರೀ ಭವನ ಸಮರ್ಪಕ ನಿರ್ವಹಣೆ ಕೊರತೆಯಿಂದಾಗಿ ಯಾವುದೇ ಸಾಂಸ್ಕೃತಿಕ, ಸಾಹಿತ್ಯದ ಚಟುವಟಿಕೆಗಳು ನಡೆಯದೆ ಮೂಲಗುಂಪಾಗಿದೆ.
ಭವನ ನಿರ್ಮಾಣವಾಗಿ ಸಾಕಷ್ಟು ವರ್ಷಗಳೇ ಸಂದಿವೆ. ಆದರೆ ಇಲ್ಲಿ ನಡೆದಿರುವ ಕಾರ್ಯಕ್ರಮಗಳು ವಿರಳ. ಭವನದ ಒಳಗೆ ಜೇಡನ ಬಲೆ ಕಟ್ಟಿದ್ದು, ಧೂಳು ಹಿಡಿದಿದೆ. ಮಳೆಗೆ ಅಲ್ಲಲ್ಲಿ ಕಟ್ಟಡದ ಚಾವಣಿ ನೆನೆದು ಗೋಡೆ ಕಪ್ಪಾಗಿದೆ. ಕಿಟಕಿಗಳ ಗಾಜು ಸಹ ಒಡೆದಿದೆ. ಕೆಲವು ಕಿಟಕಿಗಳಿಗೆ ಕಬ್ಬಿಣದ ತಗಡು, ಪ್ಲೇವುಡ್ ನಿಂದ ಮುಚ್ಚಲಾಗಿದೆ.
ಭವನದ ಗೋಡೆ, ಮೆಟ್ಟಿಲುಗಳು ಬಿರುಕು ಬಿಟ್ಟಿದ್ದು, ಭವನದ ಎಡ, ಬಲ ಭಾಗದಲ್ಲಿ ಗಿಡಗಳು ಬೆಳೆದಿವೆ. ಭವನದ ಪಕ್ಕದಲ್ಲಿ ಕಸಕಡ್ಡಿಗಳು ರಾಶಿ ಬಿದ್ದು ಹುಳುಗಳ ಆವಾಸ ಸ್ಥಾನವಾಗಿದೆ. ಭವನದ ಮೆಟ್ಟಿಲಿನ ಕಲ್ಲುಗಳು ಮುರಿದಿವೆ. ಭವನದ ಗೇಟ್ ಗೆ ಬೀಗ ಹಾಕದಿರುವುದರಿಂದ ನಾಯಿ, ಇನ್ನಿತರ ಪ್ರಾಣಿಗಳು ಮಲಗಿ ಗಲೀಜು ಮಾಡುತ್ತಿವೆ.
ಸುಣ್ಣ ಬಣ್ಣ ಕಾಣದ ಕಟ್ಟಡ ಪಾಳು ಬಂಗಲೆಯಂತೆ ಕಂಡು ಬರುತ್ತಿದೆ. ಸಮರ್ಪಕ ನಿರ್ವಹಣೆ ಇಲ್ಲದೆ ಭವನ ಶಿಥಿಲವಾಗಿದ್ದು ಬೀಳುವ ಮುನ್ನ ಜಿಲ್ಲಾಡಳಿತ ದುರಸ್ತಿಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC