ಕನ್ನಡದ ಹಿರಿಯ ನಟ ಉದಯ್ ಹುತ್ತಿನಗದ್ದೆ ಗುರುವಾರ ಇಹಲೋಕ ತ್ಯಜಿಸಿದ್ದಾರೆ. 1987ರಲ್ಲಿ ಡಾ.ರಾಜ್ ಕುಮಾರ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದ ದೇವತಾ ಮನುಷ್ಯ ಸೇರಿ ಹಲವು ಚಿತ್ರದಲ್ಲಿ ಇವರು ನಟಿಸಿದ್ದರು..
ಕನ್ನಡದಲ್ಲಿ ನಟನಾಗಿ ಹಾಗೂ ಪೋಷಕ ಪಾತ್ರಗಳಿಂದ ಗಮನ ಸೆಳೆದಿದ್ದ ನಟ ಉದಯ್ ಹುತ್ತಿನಗದ್ದೆ ಗುರುವಾರ ಸಂಜೆ ನಿಧನರಾಗಿದ್ದಾರೆ. 1987ರಲ್ಲಿ ಆರಂಭ ಸಿನಿಮಾದಲ್ಲಿ ನಾಯಕ ನಟನಾಗಿ ಮಿಂಚಿದ್ದ ಇವರು, ಜಯಭೇರಿ, ಅಮೃತ ಬಿಂದು, ಕರ್ಮ, ಉಂಡುಹೋದ ಕೊಂಡಹೋದ ಸೇರಿದಂತೆ ಸಿನಿಮಾಗಳಲ್ಲಿ ಅಭಿನಯಿಸಿದ್ದರು.
ಚಿಕ್ಕಮಗಳೂರು ಮೂಲದ ಉದಯ್ ಹುತ್ತಿನಗದ್ದೆ ಮೈಸೂರು ಹಾಗೂ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ‘ಅಭಿನಯ ತರಂಗ’ದಲ್ಲಿ ನಟನೆಯ ತರಬೇತಿ ಪಡೆದಿದ್ದರು. ಆ ಬಳಿಕ ಚಿತ್ರರಂಗಕ್ಕೆ ಕಲಾವಿದನಾಗಿ ಪದಾರ್ಪಣೆ ಮಾಡಿದ್ದರು. ಖ್ಯಾತ ನಾಮರೊಂದಿಗೆ ತೆರೆ ಹಂಚಿಕೊಂಡಿದ್ದರೂ ಕೂಡ ಅವರು ಕೆಲ ವರ್ಷಗಳ ನಂತರ ಚಿತ್ರರಂಗದಿಂದ ದೂರ ಉಳಿದರು.
ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿಯಲ್ಲಿ ಪರಿಣತಿ ಹೊಂದಿದ್ದ ಉದಯ್ ಅವರು ಬೆಂಗಳೂರಿನಲ್ಲಿ ಅದೇ ಉದ್ಯಮದಲ್ಲಿ ತೊಡಗಿಸಿಕೊಂಡು ಯಶಸ್ವಿಯಾದರು. ಚಿಕ್ಕಮಗಳೂರಿನಲ್ಲಿ ಕಾಫಿ ಎಸ್ಟೇಟ್ ಹೊಂದಿರುವ ಅವರು ಅದರಲ್ಲೂ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು.
ತಮ್ಮ ಪ್ರತಿಭೆಯಿಂದ ಅಪಾರ ಜನಮನ್ನಣೆ ಗಳಿಸಿದ್ದ ಉದಯ್ ಅವರ ನಿಧನಕ್ಕೆ ಚಿತ್ರರಂಗ ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ವರದಿ: ಮುರುಳಿಧರನ್ ಆರ್ ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5