ತುಮಕೂರು: ರಾಯಚೂರು ಜಿಲ್ಲೆಯ ಮಲಿಯಾಬಾದ್ ಪ್ರದೇಶದಲ್ಲಿ ಕನ್ನಡದ ಅರಸ ಅಮೋಘ ವರ್ಷನ ಪ್ರಮುಖ ಶಿಲಾ ಶಾಸನವೊಂದು ಪತ್ತೆಯಾಗಿದೆ.
ತುಮಕೂರು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಎಂ.ಕೊಟ್ರೇಶ್ ಅವರು ಕ್ಷೇತ್ರ ಕಾರ್ಯ ಮಾಡುವ ಸಂದರ್ಭದಲ್ಲಿ ಈ ಶಾಸನವು ಪತ್ತೆಯಾಗಿದೆ.
ಆ ಪ್ರದೇಶದ ಗೋಶಾಲೆಯಲ್ಲಿ ಕೆಲಸ ಮಾಡುವ ರಾಜಸ್ಥಾನದ ಮುರಳಿ ಅವರು ಮಲಿಯಾಬಾದ್ ಕೋಟೆಯ ಆವರಣದಲ್ಲಿ ಮುಳ್ಳು ಕಂಟಿಗಳನ್ನು ಸ್ವಚ್ಛಗೊಳಿಸುವಾಗ ಈ ಶಾಸನವು ಕಂಡು ಬಂದಿದೆ. ಸಂಶೋಧನೆಯಿಂದ ಶಾಸನದ ವಿವರಗಳು ಬೆಳಕಿಗೆ ಬಂದಿವೆ ಎಂದು ಪ್ರೊ.ಎಂ.ಕೊಟ್ರೇಶ್ ತಿಳಿಸಿದ್ದಾರೆ.
ಈ ಶಾಸನವು ರಾಷ್ಟ್ರಕೂಟರ ಅರಸ ಅಮೋಘ ವರ್ಷನ ಆಡಳಿತದ ಅವಧಿಯ ಅಂದರೆ ಸು.ಸಾ.ಶ. 850ರ ಸಂದರ್ಭದ್ದಾಗಿದ್ದು, ಇಪ್ಪತ್ತು ಸಾಲುಗಳನ್ನು ಒಳಗೊಂಡಿದೆ.
“ಈ ಶಾಸನದಲ್ಲಿ ಬಲ್ಲಾಳೇಶ್ವರಪುರದ ಉಲ್ಲೇಖ ಬರುತ್ತದೆ. ಈ ಬಲ್ಲಾಳೇಶ್ವರಪುರ ಯಾವುದು ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ. ಪಲ್ಲವಾನ್ವಯ ಎಂಬ ವಿಷಯದ ಪ್ರಸ್ತಾಪವಿದ್ದು ತುಮಕೂರು ಜಿಲ್ಲೆಯ ಸಂಬಂಧವನ್ನು ತೋರಿಸುತ್ತದೆ. ತುಮಕೂರು ಜಿಲ್ಲೆಯ ಅಂಚಿನಲ್ಲಿರುವ ಹೆಂಜೆರು ಅಥವಾ ಹೇಮಾವತಿ ನೊಳಂಬರ ರಾಜಧಾನಿ ಈ ನೊಳಂಬರಿಗೆ ಪಲ್ಲವಾನ್ವಯ ಎಂದು ಕರೆದಿರುವುದು ಈ ಶಾಸನದಲ್ಲಿ ಕಂಡುಬುರುತ್ತದೆ” ಎಂದು ಪ್ರೊ. ಎಂ.ಕೊಟ್ರೇಶ್ ತಿಳಿಸಿದ್ದಾರೆ.
ಅಮೋಘ ವರ್ಷನ ಆಡಳಿತದ ಅವಧಿಯಲ್ಲಿ ರಾಯಚೂರನ್ನು ಎಡದೊರೆ ನಾಡು, ಎರೆನಾಡು ಸಿರೇಯ ನಾಡೆಂದು ಕರೆಯಲಾಗಿದೆ. ಶಾಸನದಲ್ಲಿ ಮುಳುಗುಂದ ನಾಡಿನ ಉಲ್ಲೇಖವಿದ್ದು, ಯಾವುದೀ ಮುಳುಗುಂದ ಎನ್ನುವುದು ಕುತೂಹಲವಾಗಿ ಉಳಿದಿದೆ. ಶಾಸನದ ಕುರಿತು ಮತ್ತಷ್ಟು ಸಂಶೋಧನೆ ನಡೆಯಬೇಕಿದ್ದು, ಇನ್ನು ಅನೇಕ ಕುತೂಹಲ ಸಂಗತಿಗಳು ಬೆಳಕಿಗೆ ಬರಲಿವೆ ಎಂದು ಪ್ರೊ.ಎಂ.ಕೊಟ್ರೇಶ್ ಮಾಹಿತಿ ಹಂಚಿಕೊಂಡಿದ್ದಾರೆ.
ಸಂಶೋಧನಕಾರ್ಯದಲ್ಲಿ ವಿದ್ಯಾರ್ಥಿ ಶಶಿಕುಮಾರ ನಾಯಕ್ ಹಾಗೂ ತುಮಕೂರು ವಿವಿ ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಶ್ರೀಪಾದ ಕುಲಕರ್ಣಿ ಸಹಕರಿಸಿದ್ದಾರೆ ಎಂದು ತಿಳಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx