ತುಮಕೂರು: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನಧಿಕೃತ ಆಸ್ತಿಗಳನ್ನು ಹೊಂದಿರುವವರು ಬಿ–ಖಾತಾಗೆ ದಾಖಲಿಸಲು 3 ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೆಸ್ವಾನ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಅನಧಿಕೃತ ಆಸ್ತಿದಾರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿಯನ್ನು ಕೊಟ್ಟಿದೆ. ಬಿ–ಖಾತಾ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಅನಧಿಕೃತ ಬಡಾವಣೆಗಳ ಕಟ್ಟಡ ಮಾಲೀಕರು/ನಿವೇಶನದಾರರು ಮೂರು ತಿಂಗಳೊಳಗೆ ಬಿ–ಖಾತಾಗೆ ದಾಖಲಿಸಲು ಅವಕಾಶ ನೀಡಲಾಗಿದೆ ಎಂದು ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಿ-ಖಾತಾ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಅನಧಿಕೃತ ಬಡಾವಣೆಗಳ ಕಟ್ಟಡ ಮಾಲೀಕರು/ನಿವೇಶನದಾರರಿಗೆ ಬಿ–ಖಾತಾ ನೀಡಲು ಸರ್ಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಫೆಬ್ರವರಿ 18ರಿಂದ ಮೂರು ತಿಂಗಳೊಳಗೆ ನಗರ ಸ್ಥಳೀಯ ಸಂಸ್ಥೆಯ ಅನಧಿಕೃತ ಬಡಾವಣೆಯಲ್ಲಿನ ನಿವೇಶನದಾರರಿಗೆ ಬಿ–ಖಾತಾ ನೀಡುವ ಕಾರ್ಯವನ್ನು ಆಂದೋಲನ ರೀತಿಯಲ್ಲಿ ಆರಂಭಿಸಿದ್ದೇವೆ ಎಂದು ಹೇಳಿದರು.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸುಮಾರು 70,000ಕ್ಕೂ ಅಧಿಕ ಅನಧಿಕೃತ ಆಸ್ತಿಗಳಿದ್ದು, ಅರ್ಹವಾದ ಆಸ್ತಿಗಳಿಗೆ ಬಿ-ಖಾತಾ ನೀಡಲು ಫೆ.18ರಿಂದ ಆಯಾ ನಗರ ಸ್ಥಳೀಯ ಸಂಸ್ಥೆಗಳ ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್ ತೆರೆದು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಆಸ್ತಿದಾರರು 2024ರ ಸೆಪ್ಟೆಂಬರ್ 10ಕ್ಕಿಂತ ಮುಂಚೆ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿಯಾಗಿರುವವರು ಮಾತ್ರ ಬಿ–ಖಾತಾ ಮಾಡಿಸಲು ಅರ್ಹರಿರುತ್ತಾರೆ. ಭೂ ಪರಿವರ್ತನೆಯಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾಗದ ಬಡಾವಣೆಗಳಲ್ಲಿನ ಹಾಗೂ ಭೂಪರಿವರ್ತನೆಯಾಗದೆ ಉಪವಿಭಜನೆ ಮಾಡಿ ನಿವೇಶನಗಳಾಗಿ ಮಾರಾಟ ಮಾಡಿರುವ ನಿವೇಶನ/ಕಟ್ಟಡಗಳನ್ನು ಅನಧಿಕೃತ ಆಸ್ತಿಗಳೆಂದು ಪರಿಗಣಿಸಿ ಬಿ–ಖಾತಾದಲ್ಲಿ ನಮೂದಿಸಲಾಗುವುದು ಎಂದು ತಿಳಿಸಿದರು.
ಬಿ–ಖಾತಾದಲ್ಲಿ ದಾಖಲಿಸಲಾಗುವ ಆಸ್ತಿಗಳಿಗೆ ಮೊದಲ ಬಾರಿಗೆ ಸ್ವತ್ತು ತೆರಿಗೆಯ 2ರಷ್ಟು ತೆರಿಗೆಯನ್ನು ಹಾಗೂ ನಂತರದ ವರ್ಷಗಳಲ್ಲಿ ಸ್ವತ್ತು ತೆರಿಗೆಯನ್ನು ಮಾತ್ರ ವಿಧಿಸಲಾಗುವುದು. ಬಿ–ಖಾತಾದಲ್ಲಿ ದಾಖಲಿಸಲು ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸ್ವಾಧೀನಪಡಿಸುವ ನೋಂದಾಯಿತ ಮಾರಾಟ ಪತ್ರ/ದಾನ ಪತ್ರ/ವಿಭಾಗ ಪತ್ರಗಳನ್ನು ಹೊಂದಿರಬೇಕು. ಸರ್ಕಾರಿ ಜಾಗದಲ್ಲಿರುವ ಸ್ವತ್ತು, ಸರ್ಕಾರದ ನಿಗಮ ಮಂಡಳಿಗಳ ಜಾಗ, ನಗರ ಸ್ಥಳೀಯ ಸಂಸ್ಥೆಗಳ ಜಾಗದಲ್ಲಿರುವ ಸ್ವತ್ತುಗಳನ್ನು ಬಿ-ಖಾತಾದಲ್ಲಿ ನಮೂದಿಸಲು ಅವಕಾಶವಿರುವುದಿಲ್ಲ ಎಂದು ತಿಳಿಸಿದರು.
ಮಹಾನಗರಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ಮಾತನಾಡಿ, ಅನಧಿಕೃತ ಸ್ವತ್ತುಗಳಿಗೆ ನಮೂನೆ–2ಎ/3ಎ ನೀಡಿದ್ದಲ್ಲಿ ಸದರಿ ಆಸ್ತಿಯನ್ನು ಸಕ್ರಮಗೊಳಿಸಲಾಗಿದೆ ಎಂದು ಆಸ್ತಿ ಮಾಲೀಕರು ಭಾವಿಸುವಂತಿಲ್ಲ. ಬಿ–ಖಾತಾಗೆ ಅನಧಿಕೃತ ಆಸ್ತಿಯನ್ನು ದಾಖಲಿಸಲಿಚ್ಛಿಸುವವರಿಗಾಗಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರತ್ಯೇಕ ಕೌಂಟರ್ ಗಳನ್ನು ತೆರೆಯಲಾಗುವುದು. ಈ ಕೌಂಟರ್‌ಗಳು ರಜಾ ದಿನಗಳಂದೂ ಸಹ ಕಾರ್ಯನಿರ್ವಹಿಸಲಿವೆ. ಆಸ್ತಿದಾರರು ಬಿ–ಖಾತೆಗೆ ದಾಖಲಿಸಲು ಮದ್ಯವರ್ತಿಗಳನ್ನು ಸಂಪರ್ಕಿಸದೆ ನೇರವಾಗಿ ಕೌಂಟರ್‌ಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
ಆಸ್ತಿದಾರರು ಬಿ–ಖಾತಾಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ ತುಮಕೂರು ಮಹಾನಗರ ಪಾಲಿಕೆ (9945212919 / 9449872599), ತಿಪಟೂರು ನಗರಸಭೆ(9448596379), ಸಿರಾ ನಗರಸಭೆ(8133270041), ಕುಣಿಗಲ್ ಪುರಸಭೆ(08132-220225), ಪಾವಗಡ ಪುರಸಭೆ (9742821910), ಚಿಕ್ಕನಾಯಕನಹಳ್ಳಿ ಪುರಸಭೆ (8660353951), ಮಧುಗಿರಿ ಪುರಸಭೆ (6361773631) ಕೊರಟಗೆರೆ ಪಟ್ಟಣ ಪಂಚಾಯಿತಿ (9964645923) ಗುಬ್ಬಿ ಪಟ್ಟಣ ಪಂಚಾಯಿತಿ (7406644909), ತುರುವೇಕೆರೆ ಪಟ್ಟಣ ಪಂಚಾಯಿತಿ (7026250340) ಹುಳಿಯಾರು ಪಟ್ಟಣ ಪಂಚಾಯಿತಿ(8133256056)ಯನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4