ತುಮಕೂರು: ಉತ್ತಮ ಸಮಾಜವನ್ನು ಸೃಷ್ಟಿಸುವಲ್ಲಿ ಶಿಕ್ಷಕರು, ಅಧಿಕಾರಿಗಳು ಸೇರಿದಂತೆ ಶಿಕ್ಷಣ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಇಂದು ಜಿಲ್ಲಾ ಪಂಚಾಯತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿಂದು ಆಯೋಜಿಸಿದ್ದ ನಗರದ ಎಸ್.ಬಿ.ಎಂ. ಮುಖ್ಯ ರಸ್ತೆಯಲ್ಲಿರುವ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಳಿತು-ಕೆಡುಕು ಎರಡನ್ನೂ ಗುರುತಿಸುವ ಹಾಗೂ ಒಳ್ಳೆಯದನ್ನು ಸೃಷ್ಟಿಸಿ ಕೆಟ್ಟದ್ದನ್ನು ಶಿಕ್ಷಿಸುವ ಜವಾಬ್ದಾರಿ ಮತ್ತು ಶಕ್ತಿ ಎರಡೂ ಕೇವಲ ಶಿಕ್ಷಕನಿಗೆ ಮಾತ್ರ ಇರುವಂಥದ್ದು. ಪುರಾತನ ಕಾಲದಲ್ಲಿ ಚಾಲ್ತಿಯಲ್ಲಿದ್ದ ಗುರುಕುಲ ಶಿಕ್ಷಣ ಪದ್ಧತಿಯಿಂದ ಈಗಿನವರೆಗೂ ಗುರುವಿಗೆ ತನ್ನದೇ ಆದ ಸ್ಥಾನ-ಮಾನವಿದೆ. ಪ್ರತಿಯೊಂದು ಮಗುವು ಒಬ್ಬ ಶಿಕ್ಷಕನಲ್ಲಿ ಜ್ಞಾನ ಮತ್ತು ಚಾರಿತ್ರ್ಯಗಳೆರಡನ್ನೂ ಗುರುತಿಸುತ್ತಿರುತ್ತದೆ. ಅಂತಹ ಶ್ರೇಷ್ಟ ಸ್ಥಾನದಲ್ಲಿರುವಾತ ಮಗುವಿಗೆ ಮಾದರಿಯಾಗಿ ಮುಂದಿನ ಭವಿಷ್ಯಕ್ಕೆ ದಾರಿದೀಪವಾಗಬೇಕು ಎಂದರು.
ಗುರುತರ ಜವಾಬ್ದಾರಿಯನ್ನು ನಿರ್ವಹಿಸುವುದು ಅತ್ಯಂತ ಸೂಕ್ಷ್ಮ ಕೆಲಸವಾಗಿದೆ. ದೇಶದಲ್ಲಿ ಗಡಿ ಕಾಯುವ ಯೋಧನ ಪಾತ್ರ ಎಷ್ಟು ಪ್ರಾಮುಖ್ಯತೆ ಹೊಂದಿದೆಯೋ ಸಮಾಜದಲ್ಲಿ ಭವಿಷ್ಯದ ಉತ್ತಮ ನಾಗರಿಕರನ್ನು ಮಾನಸಿಕವಾಗಿ ತಯಾರು ಮಾಡುವಲ್ಲಿ ಶಿಕ್ಷಕರ ಪಾತ್ರವೂ ಅಷ್ಟೇ ಪ್ರಮುಖವಾಗಿದೆ ಎಂದು ತಿಳಿಸಿದರು.
ಸಮಾಜದಲ್ಲಿ ಮಾನವೀಯ ಮತ್ತು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಸಹಾಯಕ್ಕಿಂತ ಪ್ರೋತ್ಸಾಹ ಮುಖ್ಯ. ಈ ನಿಟ್ಟಿನಲ್ಲಿ ಸರ್ಕಾರವು ಪಾಲಿಕೆಯಲ್ಲಿ ಕರ್ಮಚಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವವರಿಗೂ ರಾಜ್ಯೋತ್ಸವ ಪ್ರಶಸ್ತಿ ನೀಡಲು ಮುಂದಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿ, ಗುರುವಿನ ಸ್ಥಾನವು ಸೃಷ್ಟಿಕರ್ತ ಬ್ರಹ್ಮನಿಗೂ ಮಿಗಿಲಾದದ್ದು. ಸೃಷ್ಟಿಯಲ್ಲಿ ಹೆಚ್ಚು ಗೌರವಕ್ಕೆ ಪಾತ್ರವಾಗುವ ಸ್ಥಾನ ಗುರುವಿನದ್ದು. ಗುರುವು ಕೇವಲ ಅಕ್ಷರ ಜ್ಞಾನವನ್ನಷ್ಟೇ ಅಲ್ಲದೆ,
ಜೀವನದ ಮಹತ್ವ, ಅರಿವು, ಕತ್ತಲೆಯಲ್ಲಿರುವವರಿಗೆ ಬೆಳಕು ತೋರಿಸುವ ಮಾರ್ಗದರ್ಶಿಯಾಗಿರುತ್ತಾನೆ ಎಂದರಲ್ಲದೆ, ಶಿಕ್ಷಣ ಇಲಾಖೆ ಎಂಬುದು ರಾಷ್ಟ್ರದ ಮೊದಲ ಪ್ರಜೆಯಿಂದ ಹಿಡಿದು ಸಮಾಜದ ಕಟ್ಟಕಡೆಯ ವ್ಯಕ್ತಿಯ ವ್ಯಕ್ತಿತ್ವದ ನಿರ್ಮಾತೃ. ಪ್ರತೀ ತಾಲೂಕಿನಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯವು ತನ್ನ ವ್ಯಾಪ್ತಿಯ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಬೇಕು. ಶಿಕ್ಷಕನೆಂದರೆ ಮಕ್ಕಳೊಡಗೂಡಿ ಸಮಾಜದ ನಾಗರಿಕರಿಗೂ ಮಾದರಿಯಾಗಬೇಕು. ಶಿಕ್ಷಕರು, ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕಾದರೆ ಅವರ ಮೇಲಾಧಿಕಾರಿಗಳು ಅಷ್ಟೇ ಪ್ರಾಮಾಣಿಕವಾಗಿದ್ದು, ಸ್ಪೂರ್ತಿ ನೀಡುವಂತಹ ಪರಿಸರ ಸೃಷ್ಟಿಮಾಡಬೇಕು ಎಂದರು.
ನಂತರ ಕಾರ್ಯಕ್ರಮದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮನಾಯ್ಕ, ಇಲಾಖೆ ಉಪನಿರ್ದೇಶಕ ಸಿ. ನಂಜಯ್ಯ, ಉಪನಿರ್ದೇಶಕ ಹಾಗೂ ಡಯಟ್ ಪ್ರಾಂಶುಪಾಲ ಮಂಜುನಾಥ್ ಕೆ, ಬಸವರಾಜು, ಕುಮುದಮ್ಮ ಹಾಗೂ ರಂಗಧಾಮಪ್ಪರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ ಷಹಪುರವಾಡ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು ಎನ್. ಸೇರಿದಂತೆ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ವರದಿ: ರಾಜೇಶ್ ರಂಗನಾಥ್, ತುಮಕೂರು
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700