ಮೀರತ್: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹರಿದು 40 ವರ್ಷದ ಮಹಿಳೆ ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳು ಸಾವನ್ನಪ್ಪಿದ ಘಟನೆ ನಡೆದಿದೆ. ಈ ಕುರಿತು ಪೊಲೀಸರು ಅಧಿಕೃತ ಮಾಹಿತಿ ತಿಳಿಸಿದ್ದಾರೆ.
ಕಾಸಂಪುರದಲ್ಲಿ ಮಾನವಸಹಿತ ರೈಲ್ವೇ ಕ್ರಾಸಿಂಗ್ ಇದ್ದು, ಅದನ್ನು ಈ ಕುಟುಂಬ ದಾಟಬೇಕಿತ್ತು. ಆಗ ಪತಿ ನರೇಶ್ ರೈಲ್ವೇ ಗೇಟ್ ಕೆಳಗೆ ಚಲಿಸಿ ರೈಲು ಹಳಿ ದಾಟುತ್ತಿದ್ದರು. ಅರೆಕ್ಷಣದಲ್ಲೇ ಬಂದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಗಾಡಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಬಂಡಿಯಲ್ಲಿ ಹಿಂದೆ ಕುಳಿತಿದ್ದ ಮೋನಾ ಹಾಗೂ ಅವರ ಇಬ್ಬರು ಹೆಣ್ಣು ಮಕ್ಕಳ ಮೇಲೆ ರೈಲು ಹರಿದು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದರು. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ.
ಕಂಕರಖೇರಾ ನಿವಾಸಿ ನರೇಶ್ ಅವರು ಬಂಡಿಯನ್ನು ಎಳೆದುಕೊಂಡು (ಕೈಯಿಂದ ಎಳೆಯುಬಹುದಾದ ಮೂರು ಚಕ್ರದ ಬಂಡಿ-ಸೈಕಲ್) ಹೊರಟಿದ್ದರು. ಘಟನೆಯ ವೇಳೆ ವ್ಯಕ್ತಿ ಕುಡಿದ ಅಮಲಿನಲ್ಲಿದ್ದ ಅಂತಲೂ ಹೇಳಲಾಗುತ್ತಿದೆ. ಇದು ಕೇವಲ ಒಂದು ಸೆಕೆಂಡಿನಲ್ಲಿ ನಡೆದ ಅಪಘಾತವಾಗಿದೆ. ಈ ವೇಳೆ ಅವರ ಪತ್ನಿ ಮೃತರಾದ 40 ವರ್ಷ ಮೋನಾ ಎಂಬುವವರು ಮತ್ತವರ ಪುತ್ರಿಯರಾದ ಮನೀಶಾ (14) ಮತ್ತು ಚಾರು (7) ಕುಳಿತಿದ್ದರು. ಇವರೆಲ್ಲಿ ದಿನಗೂಲಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಬಡ ಕುಟುಂಬ ಎಂದು ತಿಳಿದು ಬಂದಿದೆ.