ವಾಯುಭಾರ ಕುಸಿತದಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ನಿನ್ನೆ ಸಂಜೆಯಿಂದ ಇಡೀ ರಾತ್ರಿ ಸುರಿದ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಳೆ ಅವಾಂತರಕ್ಕೆ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.
ಪರಿಹಾರ ಕಾರ್ಯ ಕೈಗೊಳ್ಳಲಾಗದೆ ಇಬ್ಬರು ಕಾರ್ಮಿಕರ ಮೃತದೇಹ ರಾತ್ರಿ ಇಡೀ ಪೈಪ್‌ನಲ್ಲಿ ಉಳಿದಿತ್ತು. ರಾಜ್ಯದಲ್ಲಿ ಇನ್ನು ೫ ದಿನ ಮಳೆ ಬೀಳಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.ಉಲ್ಲಾಳ ಉಪನಗರದ ಉಪಕಾರ್ ಬಡಾವಣೆಯಲ್ಲಿ ಪೈಪ್ ಲೈನ್ ಕಾಮಗಾರಿ ನಡೆದಿತ್ತು. ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಕಾಮಗಾರಿ ಸ್ಥಳದಲ್ಲಿ ಮಳೆ ನೀರು ತುಂಬಿಕೊಂಡು ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಮೂವರು ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಮೃತಪಟ್ಟವರನ್ನು ಬಿಹಾರ ಮೂಲದ ದೇವ್‌ಭರತ್ ಉತ್ತರ ಪ್ರದೇಶದ ಅಂಕಿತ್ ಕುಮಾರ್ ಎಂದು ಗುರುತಿಸಲಾಗಿದೆ.
ನಿನ್ನೆ ಮಧ್ಯಾಹ್ನನಿಂದಲೇ ಆರಂಭವಾದ ಮಳೆರಾಯ ಬಿಟ್ಟು ಬಿಡದೆ ರಾತ್ರಿಯಿಡಿ ಸುರಿದಿದೆ. ನಗರದ ಕೆಲವು ಪ್ರದೇಶಗಳಲ್ಲಿ ೧೦೦ ಮಿ.ಮೀ ಮಳೆಯಾಗಿದೆ. ಬಹುತೇಕ ಭಾಗಗಳಲ್ಲಿ ರಾಜಕಾಲುವೆಗಳಲ್ಲಿ ನೀರು ಉಕ್ಕಿ ಹರಿದು ಅಕ್ಕ-ಪಕ್ಕದ ಬಡಾವಣೆಗಳಿಗೆ ನುಗ್ಗಿದೆ. ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಭಾರಿ ಅವಾಂತರ ಸೃಷ್ಠಿಯಾಗಿದೆ.
ನಿನ್ನೆ ರಾತ್ರಿ ಸುರಿದ ಮಹಾಮಳೆ ಸೃಷ್ಟಿಸಿದ ಅನಾಹುತದಿಂದ ಬೆಂಗಳೂರಿನ ಭಾಗಶಃ ಪ್ರದೇಶದ ಜನರ ಜೀವನ ಅಸ್ತವ್ಯಸ್ತಗೊಂಡಿದ್ದು, ಸರ್ಕಾರ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
ಮನೆಗಳಿಗೆ ನೀರು ನುಗ್ಗಿ ರಾತ್ರಿ ಪೂರ್ತಿ ಮನೆ ತಾರಸಿ ಹಾಗೂ ನೆರೆಮನೆಗಳ ಆಶ್ರಯ ಪಡೆದಿದ್ದ ಸಂತ್ರಸ್ತರು, ಇಂದು ದಿನವಿಡೀ ಮನೆಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಮನೆಗೆ ನುಗ್ಗಿದ ತ್ಯಾಜ್ಯ ನೀರಿನಿಂದ ಪ್ರತಿ ಮನೆಯಲ್ಲೂ ಒಂದೊಂದು ರೀತಿಯ ಅವಾಂತರ ಸೃಷ್ಟಿಯಾಗಿದ್ದು, ಸಂತ್ರಸ್ತರು ದಿನಪೂರ್ತಿ ಗೋಳಾಡುತ್ತಾ ಮನೆ ಸ್ವಚ್ಛತೆ ಕಾರ್ಯದಲ್ಲಿ ತೊಡಗಿದ್ದರು.
ಇದರ ನಡುವೆ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಮನೆಗಳಿಗೆ ನೀರು ನುಗ್ಗಿರುವ ಪ್ರತಿ ಕುಟುಂಬಕ್ಕೆ ೨೫ ಸಾವಿರ ರೂ. ಪರಿಹಾರ ಘೋಷಣೆ ಮಾಡಿದರು. ಈ ವೇಳೆ ಕೆಲವೇ ಮನೆಗಳಿಗೆ ಭೇಟಿ ನೀಡಿದರು ಎಂಬ ಆರೋಪದ ಮೇಲೆ ಹಲವು ಸಂತ್ರಸ್ತರು ಘೇರಾವ್ ಹಾಕಿದ ಘಟನೆಯೂ ನಡೆಯಿತು.
ನೀರಿನ ಹರಿವು ಕಡಿಮೆಯಾದ ಬಳಿಕ ಮನೆಗಳು ಗದ್ದೆಗಳಂತಾಗಿದ್ದು, ಬೆಲೆ ಬಾಳುವ ವಸ್ತುಗಳು ಮಾತ್ರವಲ್ಲದೆ ಆಹಾರ ಪದಾರ್ಥ, ಔಷಧ, ಪಠ್ಯಪುಸ್ತಕಗಳೂ ನೀರುಪಾಲಾಗಿ ಕುಡಿಯಲೂ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಬರೋಬ್ಬರಿ ನಾಲ್ಕೈದು ತಾಸು ಸುರಿದ ಮಳೆಯಿಂದಾಗಿ ಬಹುತೇಕ ರಸ್ತೆಗಳು ನದಿಯಂತಾಗಿ ಕಾರುಗಳೇ ತೇಲಿಕೊಂಡು ಹೋಗಿದ್ದವು. ಪರಿಣಾಮ ನೂರಾರು ಕಾರು ಹಾಗೂ ದ್ವಿಚಕ್ರ ವಾಹನಗಳು ಹಾಳಾಗಿದ್ದು, ಮಾಲೀಕರು ಪರಿತಪಿಸುವಂತಾಗಿದೆ.
ಅತಿಹೆಚ್ಚು ಮಳೆಹಾನಿಗೆ ಒಳಗಾಗಿರುವ ಹೊಸಕೆರೆಹಳ್ಳಿ, ದತ್ತಾತ್ರೇಯನಗರ, ರಾಜರಾಜೇಶ್ವರಿನಗರ, ಪಾದರಾಯನಪುರ, ಕೆಂಗೇರಿ ಉಪನಗರ ಪ್ರದೇಶಗಳ ಮನೆಗಳಲ್ಲಿ ಕೊಳಚೆ, ಕೆಸರು ಮೆತ್ತಿಕೊಂಡಿದ್ದ ವಸ್ತುಗಳನ್ನು ಮನೆ ಆವರಣದಲ್ಲಿ ಗುಡ್ಡೆ ಹಾಕಿಕೊಂಡು ಕಣ್ಣೀರಿಡುವ ದೃಶ್ಯ ಸಾಮಾನ್ಯವಾಗಿತ್ತು.ಇಲ್ಲಿನ ನೀಲಸಂದ್ರದ ರೋಸ್ ಗಾರ್ಡನ್‌ನಲ್ಲಿ ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದ ವಸ್ತುಗಳು ನೀರುಪಾಲಾಗಿವೆ. ಕೋಡಿಗೆಹಳ್ಳಿ ಬಳಿಯ ಟಾಟಾನಗರದ ರಸ್ತೆ ಮಧ್ಯದಲ್ಲಿ ಮರ ಉರುಳಿಬಿದ್ದಿದೆ. ರಿಚ್ಮಂಡ್ ರಸ್ತೆಯಲ್ಲಿ ರಾತ್ರಿಯಿಂದಲೂ ನೀರು ನಿಂತಿದ್ದು, ರಸ್ತೆ ಕೆರೆಯಂತಾಗಿದೆ.
ಶಿವಾಜಿನಗರದಲ್ಲಿಯೂ ಮಳೆ ನೀರು ಅಂಗಡಿಗಳಿಗೆ ನುಗ್ಗಿತು. ರಸ್ತೆಗಳು ಜಲಾವೃತಗೊಂಡವು. ರಾಜರಾಜೇಶ್ವರಿ ನಗರದ ಕೆಂಚೇನಹಳ್ಳಿಯಲ್ಲಿ ಮಳೆ ಅನಾಹುತದಿಂದ ಜನರು ಸಂಕಷ್ಟ ಅನುಭವಿಸಿದರು. ಮನೆಗಳು, ಅಪಾರ್ಟ್‌ಮೆಂಟ್ ಬೇಸ್‌ಮೆಂಟ್‌ಗಳಲ್ಲಿ ಕೆಸರು ನೀರು ತುಂಬಿಕೊಂಡಿದೆ. ಬಹುತೇಕ ಕಾರುಗಳು ಅರ್ಧಕ್ಕರ್ಧ ನೀರಿನಲ್ಲಿ ಮುಳುಗಿದ್ದವು.
ಕಾವೇರಿ ಥಿಯೇಟರ್ ಜಂಕ್ಷನ್ ಬಳಿಯ ಅಂಡರ್‌ಪಾಸ್‌ನಲ್ಲಿ ಲಾರಿಯೊಂದು ಮೇಲಿನ ಬ್ರಿಡ್ಜ್‌ಗೆ ತಾಗಿ ಸಿಲುಕಿಕೊಂಡಿದೆ. ಮಹದೇವಪುರದ ಗುರುರಾಜ ಲೇಔಟ್‌ನ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಕೊಳಕು ನೀರು ನುಗ್ಗಿದೆ. ಶ್ರೀರಾಂಪುರ ಮೆಟ್ರೋ ಸ್ಟೇಷನ್‌ಗೆ ನೀರು ನುಗ್ಗಿ ಅವಾಂತರ ಉಂಟುಮಾಡಿದೆ. ಬೆಂಗಳೂರು ನಗರದಲ್ಲಿ ಭಾರಿ ಮಳೆಯಿಂದಾಗಿ ಭಾರಿ ಮಳೆಯಿಂದ ಯುಬಿ ಸಿಟಿ ಮುಂದೆ ರಸ್ತೆ ಜಲಾವೃತವಾಗಿದ್ದು, ೩ ಅಡಿಯಷ್ಟು ನೀರು ನಿಂತು ವಾಹನ ಸವಾರರು ಪರದಾಡಬೇಕಾಯಿತು.
ಮಳೆಯಿಂದ ಶಿವಾಜಿನಗರದಲ್ಲಿ ೮ ತಿಂಗಳ ಹಿಂದಷ್ಟೇ ನಿರ್ಮಿಸಿದ್ದ ೨೦ ಅಡಿ ಎತ್ತರದ ಕಾಂಪೌಂಡ್ ಕುಸಿದಿದೆ. ಕಾಂಪೌಂಡ್ ಕುಸಿತದಿಂದ ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್‌ಗಳು ಜಖಂಗೊಂಡಿರುವ ಪ್ರಕರಣ ವರದಿಯಾಗಿದೆ.
ಮತ್ತೊಂದೆಡೆ, ರಾತ್ರಿ ಸುರಿದ ಮಳೆಯಿಂದಾಗಿ ಮಲ್ಲೇಶ್ವರಂ ೧೮ನೇ ಕ್ರಾಸ್‌ನಲ್ಲಿ ಬೃಹತ್ ಮರವೊಂದು ನೆಲಕ್ಕೆ ಉರುಳಿದೆ. ಮರ ಬಿದ್ದ ಕಾರಣ ಕಾಂಪೌಂಡ್ ಕುಸಿದಿದೆ. ಮಲ್ಲೇಶ್ವರಂ ಕಡೆಯಿಂದ ಸದಾಶಿವನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೂ ಬಂದ್ ಆಗಿದೆ. ಮರ ತೆರವುಗೊಳಿಸಲು ಬಿಬಿಎಂಪಿ ಇನ್ನೂ ಕಾಮಗಾರಿ ಆರಂಭಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ವಿಮಾನ ನಿಲ್ದಾಣಕ್ಕೆ ಸಂಪರ್ಕವಿಲ್ಲ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನಿಂದ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ಕೆರೆಯ ನೀರು ನುಗ್ಗಿದ ಕಾರಣ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ರಸ್ತೆಯ ಎರಡೂ ಬದಿಗಳಲ್ಲಿ ಸುಮಾರು ೫ ಕಿಮೀ ಉದ್ದಕ್ಕೆ ಸಾವಿರಾರು ವಾಹನಗಳು ನಿಂತಿವೆ. ಹುಣಸಮಾರನಹಳ್ಳಿ ಮೇಲ್ಸುತುವೆ ಬಳಿ ಪದೇಪದೆ ಹೀಗೆ ಆಗುತ್ತಿದ್ದು, ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.
ಕೆರೆಯಂತಾದ ಆರ್ ಆರ್ ನಗರದ ಬಡಾವಣೆ..!
ಮಳೆಗೆ ಕೆರೆಯಂತಾದ ಆರ್ ಆರ್ ನಗರದ ಬಡಾವಣೆ ಐಡಿಯಲ್ ಹೋಮ್ಸ್ ಲೇಔಟ್ ಇನ್ನು ರಾಜಕಾಲುವೆ ಪಕ್ಕದಲ್ಲೇ ಇರುವ ಐಡಿಯಲ್ ಹೋಮ್ಸ್ ಬಡಾವಣೆಯಿಂದಾಗಿ ರಸ್ತೆಯ ಮೇಲೆ ಕೊಳಚೆ ನೀರು ಬಂದು ನಿಂತಿದೆ, ಕೆಲವು ಮನೆಗಳಿಗೂ ನೀರು ನುಗ್ಗಿದ್ದು ಮನೆಯಲ್ಲಿ ಜಾಗರಣೆ ಮಾಡಿ ನೀರನ್ನು ಹೊರ ಹಾಕಿದ್ದಾರೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB