ಹಾಸನ: ನಾನು ಈ ಹಿಂದೆ ಅನೇಕ ಕಾರ್ಯಕ್ರಮಗಳಿಗೆ ಹಾಸನ ಜಿಲ್ಲೆಗೆ ಆಗಮಿಸಿದ್ದೆ, ಆದರೆ ಇಂದು ಜನರಲ್ಲಿರುವ ಉತ್ಸಾಹ ಈ ಹಿಂದೆ ಕಂಡಿರಲಿಲ್ಲ. ಇದನ್ನು ನೋಡಿದರೆ ಪೂರ್ವದಲ್ಲಿ ಸೂರ್ಯ ಉದಯಿಸುವುದು ಎಷ್ಟು ಸತ್ಯವೋ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದು ಗೊತ್ತಾಗುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಹಾಸನದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ “ಪ್ರಜಾಧ್ವನಿ” ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಬಿಜೆಪಿ ಸರ್ಕಾರ ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ಈ ಸರ್ಕಾರ ನಾಡಿನ ಬಡವರು, ದಲಿತರು, ಮಹಿಳೆಯರು, ಮಕ್ಕಳು, ಅಲ್ಪಸಂಖ್ಯಾತರ ವಿರೋಧಿ ಸರ್ಕಾರ. ಹಾಸನ ಅತಿ ಹೆಚ್ಚು ರೈತರನ್ನು ಹೊಂದಿರುವ ಜಿಲ್ಲೆ. 2022ರ ಒಳಗಡೆ ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇವೆ ಎಂದು 2016ರಲ್ಲಿ ನರೇಂದ್ರ ಮೋದಿ ಅವರು ರೈತರಲ್ಲಿ ಭ್ರಮೆಯನ್ನು ಹುಟ್ಟಿಸಿದ್ದರು. ಇದನ್ನು ಹೇಳುತ್ತ ಹೇಳುತ್ತಲೇ 3 ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತಂದರು. ದೆಹಲಿಯ ಹೊರವಲಯದಲ್ಲಿ ದೇಶದ ರೈತರು ಅನೇಕ ದಿನಗಳ ಕಾಲ ಹೋರಾಟ ಮಾಡಿದರು, ಮೊದಮೊದಲು ಮೋದಿ ಅವರು ಕ್ಯಾರೇ ಎನ್ನಲಿಲ್ಲ, ಕೊನೆಗೆ ಹೋರಾಟದ ಕಾವು ಜಾಸ್ತಿಯಾದ ಮೇಲೆ ಬೇರೆ ದಾರಿಯಿಲ್ಲದೆ 3 ಮಾರಕ ಕಾಯ್ದೆಗಳನ್ನು ವಾಪಾಸು ಪಡೆದರು. ರಾಜ್ಯದಲ್ಲಿ ಕೂಡ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದರು, ದೇವರಾಜ ಅರಸು ಅವರ ಕಾಲದಲ್ಲಿ ಉಳುವವನೆ ಭೂಮಿಯ ಒಡೆಯ ಎಂದು ಮಾಡಿದ್ದರು, ಈ ಸರ್ಕಾರ ಭೂಸುಧಾರಣಾ ಕಾಯ್ದೆಯ ಸೆಕ್ಷನ್ 79(ಎ), (ಬಿ), (ಸಿ) ಗಳನ್ನು ತೆಗೆದುಹಾಕಿ ಉಳ್ಳವನನ್ನು ಭೂಒಡೆಯನನ್ನಾಗಿ ಮಾಡಿದ್ದಾರೆ. ಇದರಿಂದ ಸಣ್ಣ ಮತ್ತು ಮಧ್ಯಮ ಹಿಡುವಳಿ ಹೊಂದಿರುವ ರೈತರು ನಾಶವಾಗುತ್ತಿದ್ದಾರೆ ಎಂದರು.
2018ರ ಪ್ರಣಾಳಿಕೆಯಲ್ಲಿ ಬಿಜೆಪಿ ತಾವು ಅಧಿಕಾರಕ್ಕೆ ಬಂದರೆ ಸಹಕಾರಿ ಸಂಘಗಳು ಮತ್ತು ಬ್ಯಾಂಕುಗಳಲ್ಲಿರುವ ರೈತರ 1 ಲಕ್ಷದ ವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಯಡಿಯೂರಪ್ಪ ಅಥವಾ ಬಸವರಾಜ ಬೊಮ್ಮಾಯಿ ಒಂದು ರೂಪಾಯಿ ಆದ್ರೂ ಸಾಲ ಮನ್ನಾ ಮಾಡಿದ್ದಾರ? ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ 78,000 ಕೋಟಿ ರೂ. ಮೊತ್ತದ ರೈತರ ಸಾಲವನ್ನು ಮನ್ನಾ ಮಾಡಿದ್ದರು. ಮೋದಿ ಅವರು ಪ್ರಧಾನಿಯಾಗಿ 9 ವರ್ಷವಾಗುತ್ತಾ ಬಂತು ಒಂದು ರೂಪಾಯಿಯಾದ್ರೂ ರೈತರ ಸಾಲ ಮನ್ನಾ ಮಾಡಿದ್ರಾ?
ರೈತರ ಸಾಲಮನ್ನಾ ಮಾಡುತ್ತೇವೆ ಎಂಬ ಭರವಸೆಯನ್ನು ನೀಡದ ಹೊರತಾಗಿ ಕೂಡ ಬರಗಾಲ ಬಂದು ರೈತರು ಸಂಕಷ್ಟದಲ್ಲಿದ್ದಾರೆ ಎಂಬ ಕಾರಣಕ್ಕೆ ನಾನು ಮುಖ್ಯಮಂತ್ರಿಯಾಗಿರುವಾಗ ಸಹಕಾರಿ ಬ್ಯಾಂಕುಗಳಲ್ಲಿನ 22 ಲಕ್ಷದ 27 ಸಾವಿರ ರೈತರ 50,000 ರೂ. ವರೆಗಿನ ಒಟ್ಟು 8,165 ಕೋಟಿ ರೂ. ಸಾಲವನ್ನು ಮನ್ನಾ ಮಾಡಿದ್ದೆ ಎಂದರು.
ಹಟ್ಟಿಗಳಲ್ಲಿ, ತಾಂಡಗಳಲ್ಲಿ, ಮಜರೆಗಳಲ್ಲಿ ವಾಸಮಾಡುವ ದಾಖಲೆ ರಹಿತ ಜನನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡುವ ಕಾನೂನನ್ನು ಜಾರಿ ಮಾಡಿದವರು ನಾವು. ದೇವರಾಜ ಅರಸು ಅವರ ರೀತಿಯಲ್ಲೆ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ವಾಸಿಸುವವನನ್ನೇ ಮನೆಯೊಡೆಯನನ್ನಾಗಿ ಮಾಡಿದ್ದು ನಾವು. ಅವರಿಗೆ ಈಗ ಹಕ್ಕುಪತ್ರ ಕೊಡಲು ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1


