ಚಾಮರಾಜನಗರ: ಕಾಡುಗಳ್ಳ ವೀರಪ್ಪನ್ನ ರಕ್ತಸಿಕ್ತ ಅಧ್ಯಾಯದಲ್ಲಿ ಒಂದಾದ ಮೀಣ್ಯಂ ದಾಳಿಗೆ ಇಂದಿಗೆ ಬರೋಬ್ಬರಿ 30 ವರ್ಷವಾಗಿದ್ದು, ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಾಚರಣೆಯ ಮುನ್ನ ಪೊಲೀಸರಿಗೆ ಈ ಮರಣದ ಕಥೆ ಈಗಲೂ ಕಣ್ಣೀರು ತರಿಸುತ್ತಿದೆ.
ದಂತಚೋರ ವೀರಪ್ಪನ್ ಎಲ್ಲೆ ಮೀರಿದ್ದ 90ರ ದಶಕದಲ್ಲಿ ಎಸ್ಟಿಎಫ್ನಲ್ಲಿ ಕರ್ತವ್ಯ ಮಾಡಲು ಹಿಂಜರಿಯುವಂತಹ ಪರಿಸ್ಥಿತಿ ಇತ್ತು. ಈ ವೇಳೆ ಆತನನ್ನು ಹಿಡಿದೇ ಹಿಡಿಯುತ್ತೇವೆ ಎಂದು ಸಾಹಸತನ ತೋರಿದ್ದ ಎಸ್ಪಿ ಹರಿಕೃಷ್ಣ ಹಾಗೂ ಎಸ್ಐ ಶಕೀಲ್ ಅಹ್ಮದ್, ವೀರಪ್ಪನ್ ಮರಮೋಸಕ್ಕೆ ಬಲಿಯಾಗಿದ್ದರು. ಆ ದಿನವನ್ನು ಅಂದು ಎಸ್ಟಿಎಫ್ನಲ್ಲಿದ್ದ ಹಲವು ಪೊಲೀಸರು ಈಗಲೂ ನೆನೆಯುತ್ತಾರೆ.
ಎಸ್ಟಿಎಫ್ ಪಡೆಯ ನಿರಂತರ ಕಾರ್ಯಾಚರಣೆ ವೇಳೆ ವೀರಪ್ಪನ್ ಬಂಟನಾದ ಗುರುನಾಥನ್ ಎಂಬಾತನನ್ನು ಹಿಡಿಯುವ ಅವಕಾಶ ಒದಗಿ ಬಂದಿತ್ತು. ಆದರೆ ಆತ ಕೊನೆಗೆ ಪೊಲೀಸರ ಗುಂಡಿಗೆ ಬಲಿಯಾಗಿದ್ದ. ತನ್ನ ನೆಚ್ಚಿನ ಬಂಟನನ್ನು ಕಳೆದುಕೊಂಡಿದ್ದ ವೀರಪ್ಪನ್, ಹರಿಕೃಷ್ಣ ಮತ್ತು ಶಕೀಲ್ ಅಹ್ಮದ್ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದ. ಹಠಕ್ಕೆ ಬಿದ್ದಿದ್ದ ವೀರಪ್ಪನ್, ಕಮಲ ನಾಯ್ಕ್ ಎಂಬುವವನ ಮೂಲಕ ದಾಳಿ ನಡೆಸಲು ಯೋಜನೆ ರೂಪಿಸುತ್ತಾನೆ. ಕಮಲ ನಾಯ್ಕ್ ವೀರಪ್ಪನ್ ಮತ್ತು ಪೊಲೀಸರಿಗೆ ಮಾಹಿತಿದಾರನಂತೆ ಕೆಲಸ ಮಾಡುತ್ತಾನೆ.
ವ್ಯಾಪಾರಿಗಳ ಸೋಗಿನಲ್ಲಿ ಕಾಡುಗಳ್ಳನನ್ನು ಹಿಡಿಯಲು ಹೊರಟ ಹರಿಕೃಷ್ಣ ಮತ್ತು ಶಕೀಲ್ ಅಹ್ಮದ್ ಅವರನ್ನು ಮೀಣ್ಯಂ ಬಳಿ ವೀರಪ್ಪನ್ ಹೊಂಚುಹಾಕಿ ಕಾದು ಗುಂಡಿನ ಮಳೆಯನ್ನೇ ಸುರಿಸಿ ಬಲಿ ಪಡೆಯುತ್ತಾನೆ. ಘಟನೆಯಲ್ಲಿ ಅಪ್ಪಚ್ಚು, ಸುಂದರ್, ಕಾಳಪ್ಪ ಸೇರಿದಂತೆ ಕಮಲ ನಾಯ್ಕನೂ ಮೃತಪಡುತ್ತಾನೆ. ಕೆಲ ಪೊಲೀಸರು ಗಾಯಗೊಂಡು ಅಂದು ಪೆಟ್ಟು ತಿಂದ ಬುಲೆಟ್‍ಗಳ ಜೊತೆ ಈಗಲೂ ಬದುಕು ನಡೆಸುತ್ತಿದ್ದಾರೆ.
ಅಂದಿನ ಘಟನೆಯಲ್ಲಿ ಗಾಯಗೊಂಡ ಚಾಮರಾಜನಗರ ಪಿಎಸ್ಐ ಆಗಿದ್ದ ದಿವಂಗತ ಸಿದ್ದರಾಜ ಸೇರಿದಂತೆ ಹಲವರು ಗಾಯಗೊಂಡಿದ್ದರು. ಪೊಲೀಸರಿಗೆ ಸ್ವಾತಂತ್ರ್ಯದ ಸಂಭ್ರಮಾಚರಣೆ ಹಿಂದಿನ ದಿನ ಬರುವ ಕರಾಳ ದಿನ ಮೀಣ್ಯಂ ದಾಳಿಯಾಗಿದೆ. ದಕ್ಷ, ಸಾಹಸಿ ಪೊಲೀಸ್ ಅಧಿಕಾರಿಗಳನ್ನು ಕಳೆದುಕೊಂಡ ಘಟನೆ ಇಂದಿಗೂ ಮಾಸದೇ ಕಣ್ಣೀರು ತರಿಸುತ್ತದೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy