ಸತತ ಆರು ಪಂದ್ಯಗಳನ್ನು ಗೆಲ್ಲೋ ಮೂಲಕ ಅಸಾಧ್ಯವನ್ನು ಸಾಧ್ಯವನ್ನಾಗಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ಲೇ ಆಫ್ಸ್ ಗೆ ಅರ್ಹತೆ ಪಡೆದುಕೊಂಡಿದೆ. ಲೀಗ್ ಹಂತದಲ್ಲಿ ತನ್ನ ಪಾಲಿನ ಕಡೇ ಲೀಗ್ ಪಂದ್ಯದಲ್ಲಿ ಬದ್ಧ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ಎದುರು 27 ರನ್ ಗಳ ಜಯ ದಾಖಲಿಸಿ ಅಭಿಮಾನಿ ಬಳಗದ ಮನದಲ್ಲಿ ಮಿಂಚಿನ ಸಂಚಲ ಉಂಟು ಮಾಡಿತು. ಇದರ ಬೆನ್ನಲ್ಲೇ ಟ್ವೀಟ್ ಮಾಡಿರುವ ಆರ್‌ಸಿಬಿ ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ವಿಶೇಷ ಸಂದೇಶ ಒಂದನ್ನು ರವಾನಿಸಿದ್ದಾರೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆರ್ ಸಿಬಿ ತಂಡಕ್ಕೆ ಮುಂದಿನ ಸುತ್ತಿನ ಅರ್ಹತೆ ಪಡೆಯಲು ಕನಿಷ್ಠ 18 ರನ್ ಗಳ ಗೆಲುವಿನ ಅಗತ್ಯವಿತ್ತು. ಅಂತಯೇ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಚಾಲೆಂಜರ್ಸ್ 218 ರನ್ ಗಳ ಬೃಹತ್ ಮೊತ್ತವನ್ನು ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ಸಿಎಸ್ ಕೆ ತಂಡವನ್ನು 191/7 ರನ್ ಗಳಿಗೆ ಕಟ್ಟಿಹಾಕುವ ಮೂಲಕ ಪ್ಲೇ ಆಫ್ಸ್ ಟಿಕೆಟ್ ಪಡೆಯಿತಲ್ಲದೆ, ಡಿಫೆಂಡಿಂಗ್ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸ್ಪರ್ಧೆಯಿಂದ ಹೊರದಬ್ಬಿತು.
ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದು ಪ್ಲೇ ಆಫ್ಸ್ ಹಂತಕ್ಕೆ ತೇರ್ಗಡೆಯಾಗಿರುವ ಆರ್ ಸಿಬಿ ತಂಡಕ್ಕೆ ಹೃದಯತುಂಬಿದ ಧನ್ಯವಾದಗಳು. ಟೂರ್ನಿಯಲ್ಲಿ ಕೆಟ್ಟ ಆರಂಭದ ಹೊರತಾಗಿಯೂ ಅಪಾರ ಬದ್ಧತೆ ಮತ್ತು ಅಮೋಘ ಆಟದ ಮೂಲಕ ಸತತ ಗೆಲುವಿನ ಹಾದಿ ಹಿಡಿಯಲಾಗಿದೆ. ಇನ್ನೇನಿದ್ದರೂ ಇದೇ ಹಾದಿಯಲ್ಲಿ ಮುನ್ನುಗ್ಗುತ್ತಾ ಟ್ರೋಫಿ ಗೆಲ್ಲುವುದಷ್ಟೇ ಬಾಕಿ,” ಎಂದು ವಿಜಯ್ ಮಲ್ಯ ತಮ್ಮ ಟ್ವಿಟರ್ ಗೋಡೆಯ ಮೇಲೆ ಬರೆದುಕೊಳ್ಳುವ ಮೂಲಕ ಆರ್ ಸಿಬಿಗೆ ಹಾರೈಸಿದ್ದಾರೆ.
ಮಲ್ಯ ಆರ್ ಸಿಬಿಗೆ ಧನ್ಯವಾದ ಹೇಳುವ ಮೂಲಕ ಸಖತ್ ಆಗಿ ಟ್ರೋಲ್ ಆಗಿದ್ದಾರೆ. ಕೆಲ ನೆಟ್ಟಿಗರ ನಗು ತರಿಸುವ ವಿಶ್ಲೇಷಣೆ ಕಾಮೆಂಟ್ ಗಳು ಇಲ್ಲಿವೆ ನೋಡಿ. ಬ್ರೋ ಬ್ಯಾಂಕ್ ಗೆ ರಜಾ ದಿನ ಇರುವಂದೇ ಟ್ವಿಟ್ ಮಾಡಿದ್ದಾರೆ ಎಂದು ಒಬ್ಬರು ಕಮೆಂಟ್ ಮಾಡಿದರೆ ಮತ್ತೊಬ್ಬರು ಎಸ್ ಬಿಐ (ಬ್ಯಾಂಕ್ ಗೆ ಕೋಟ್ಯಾಂತರ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾದ ಆರೋಪ ವಿಜಯ್ ಮಲ್ಯ ಮೇಲಿದೆ) ನಿಮಗಾಗಿ ಕಾಯುತ್ತಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


