ತುಮಕೂರು: ಮೈಕ್ರೋ ಫೈನಾನ್ಸ್ ಕಂಪನಿಯ ಕಿರುಕುಳದಿಂದ ಬೇಸತ್ತು ಸ್ವಗ್ರಾಮವನ್ನು ತೊರೆದಿದ್ದ ವಿನುತ ಮತ್ತು ಮಾರುತಿ ಕುಟುಂಬ ಮನೆಗೆ ಮರಳಿದ್ದು, ಸ್ವಗ್ರಾಮ ಸೇರಲು ಕಾರಣವಾದ ಜಿಲ್ಲಾಡಳಿತಕ್ಕೆ ಕುಟುಂಬ ಕೃತಜ್ಞತೆ ಸಲ್ಲಿಸಿದೆ.
ಜಿಲ್ಲಾಧಿಕಾರಿಗಳ ಆದೇಶಕ್ಕೆ ಜನರಿಂದ ಮೆಚ್ಚುಗೆ :
ಕೊರಟಗೆರೆ ತಾಲ್ಲೂಕು ಚನ್ನರಾಯನದುರ್ಗ ಹೋಬಳಿ ಕುರಂಕೋಟೆಯ ನಿವಾಸಿ ವಿನುತ ಮತ್ತು ಮಾರುತಿ ದಂಪತಿ ಫೈವ್ ಸ್ಟಾರ್ ಮೈಕ್ರೋ ಫೈನಾನ್ಸ್ ಕಂಪನಿಯಿಂದ 2.50ಲಕ್ಷ ರೂ.ಗಳ ಸಾಲ ಪಡೆದು, ಕೆಲವು ಕಂತುಗಳನ್ನು ಕಟ್ಟಲು ಸಾಧ್ಯವಾಗದಿದ್ದಾಗ ಫೈನಾನ್ಸ್ ಕಂಪನಿಯು ಯಾವುದೇ ನೋಟೀಸ್ ನೀಡದೆ ಏಕಾಏಕಿ ವಿನುತ ಅವರ ಮನೆಯ ಮೇಲೆ “ಈ ಸ್ವತ್ತು ಫೈವ್ ಸ್ಟಾರ್ ಫೈನಾನ್ಸ್ ಕಂಪನಿಗೆ ಅಡಮಾನವಾಗಿದೆ” ಎಂದು ಬರೆಸಿ ಅವಮಾನ ಮಾಡಿದ್ದರಿಂದ ಕುಟುಂಬವು ಸ್ವಗ್ರಾಮ ಬಿಟ್ಟು ಬೆಂಗಳೂರು ಸೇರಿತ್ತು.
ವಿಷಯ ತಿಳಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಅವರು ಜನವರಿ 30ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ವಿನುತ ಅವರು ಪಡೆದ 2.50ಲಕ್ಷ ಸಾಲಕ್ಕೆ ಕಂಪನಿಯು 4.50ಲಕ್ಷ ರೂ.ಗಳನ್ನು ವಸೂಲಿ ಮಾಡಿದೆ. ಪಡೆದ ಸಾಲಕ್ಕೆ ಪ್ರತಿ ಕಂತನ್ನು ಪಾವತಿ ಮಾಡಿದ್ದು, ಕೆಲವು ಕಂತನ್ನು ಕಟ್ಟಲು ಸಾಧ್ಯವಾಗದಿದ್ದಾಗ ಫೈನಾನ್ಸ್ ಕಂಪನಿಯು ವಿನುತ ಅವರ ಕುಟುಂಬಕ್ಕೆ ಕಿರುಕುಳ ನೀಡಿ ಊರು ಬಿಡಲು ಕಾರಣವಾಗಿರುವುದು ಬೆಳಕಿಗೆ ಬಂದಿದೆ.
ತಕ್ಷಣವೇ ಫೈನಾನ್ಸ್ ಕಂಪನಿಯು ಮನೆಯ ಗೋಡೆಯ ಮೇಲೆ ಬರೆಸಿರುವುದನ್ನು ಅಳಿಸಿ ಹೊಸದಾಗಿ ಬಣ್ಣ ಬಳಿಸಿ, ಕುಟುಂಬವನ್ನು ಮರಳಿ ಮನೆ ಸೇರಿಸಲು ಕ್ರಮಕೈಗೊಳ್ಳಬೇಕೆಂದು ತಹಶೀಲ್ದಾರ್ ಮಂಜುನಾಥ್ ಹಾಗೂ ಸಿಪಿಐ ಅನಿಲ್ ಅವರಿಗೆ ಜಿಲ್ಲಾಧಿಕಾರಿ ಸ್ಥಳದಲ್ಲಿಯೇ ಆದೇಶಿಸಿದರು.
ಜಿಲ್ಲಾಧಿಕಾರಿಗಳ ಆದೇಶವನ್ನು ಪಾಲಿಸಿದ ಅಧಿಕಾರಿಗಳ ತಂಡವು ಮನೆ ಗೋಡೆ ಮೇಲೆ ಬರೆಸಿದ ಸಾಲುಗಳನ್ನು ಅಳಿಸಿ ಬಣ್ಣ ಬಳಿದು ಕುಟುಂಬವನ್ನು ಮನೆಗೆ ಮರಳಿ ಕರೆಸುವಲ್ಲಿ ಯಶಸ್ವಿಯಾಗಿದೆ. ವಿನುತ ಮತ್ತು ಮಾರುತಿ ಕುಟುಂಬವು ಸ್ವಗ್ರಾಮಕ್ಕೆ ಮರಳಲು ಅವಕಾಶ ಮಾಡಿಕೊಟ್ಟ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅಧಿಕಾರಿಗಳ ತಂಡದ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx