ನಮ್ಮ ತುಮಕೂರು ವಿಶೇಷ ವರದಿ | ಕೊರಟಗೆರೆ : ರಾಜ್ಯದ ಎಲ್ಲ ಸರಕಾರಿ ಇಲಾಖೆಗಳಲ್ಲಿ ಮಹನೀಯರ ಜಯಂತಿಗಳನ್ನು ಗೌರವಪೂರ್ವಕವಾಗಿ ಆಚರಿಸುವುದು ಕಡ್ಡಾಯ ಎಂಬ ರಾಜ್ಯ ಸರ್ಕಾರದ ನಿದರ್ಶನವಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾರ್ಗಸೂಚಿಯಂತೆ, 2025ನೇ ಸಾಲಿನ ಜಯಂತಿ ಉತ್ಸವಗಳನ್ನು ಸರಿಯಾದ ರೀತಿಯಲ್ಲಿ ಆಯೋಜಿಸಬೇಕೆಂದು ಸರ್ಕಾರದ ಆದೇಶ (ಸಂಖ್ಯೆ: ಕಸಂವಾ 340 ಕಸಧ 2015, ದಿನಾಂಕ: 18/09/2015) ಅನ್ನು ಎಲ್ಲ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ.
ಆದರೆ, ಕೊರಟಗೆರೆ ತಾಲ್ಲೂಕಿನ ಅಕ್ಕಿರಾಂಪುರ ಗ್ರಾಮ ಪಂಚಾಯಿತಿಯಲ್ಲಿ ಈ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಶ್ರೀ ಕೈವಾರ ತಾತಯ್ಯ ಯೋಗಿ ನಾರೇಣರ ಜಯಂತಿ ಆಚರಣೆಯಲ್ಲಿ ಸುಸಜ್ಜಿತ ಭಾವಚಿತ್ರವನ್ನು ಪ್ರದರ್ಶಿಸುವ ಬದಲಿಗೆ, ಕೇವಲ ಪ್ಲೇವುಡ್ ಅಥವಾ ವುಡ್ ಶೀಟ್ ಮೇಲೆ ಫೋಟೋ ಅಂಟಿಸಿ ಅವರ ಗೌರವವನ್ನು ತಗ್ಗಿಸುವ ರೀತಿಯಲ್ಲಿ ಕಾರ್ಯಕ್ರಮ ನಡೆಸಲಾಗಿದೆ.
ಸ್ಥಳೀಯರಿಂದ ಆಕ್ರೋಶ:
ಈ ಅವ್ಯವಸ್ಥೆಯ ಬಗ್ಗೆ ಸ್ಥಳೀಯರು ಮತ್ತು ಕನ್ನಡಪರ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹನೀಯರ ಆದರ್ಶ ಮತ್ತು ಅವರ ಕೊಡುಗೆಗಳಿಗೆ ಯೋಗ್ಯ ಗೌರವ ನೀಡುವ ಬದಲು, ಅನಾದರಯುಕ್ತವಾಗಿ ಆಚರಣೆ ಮಾಡಿರುವುದು ಅಪಮಾನದಂಶ ಎಂದು ಅವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ, ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಮತ್ತು ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆಗ್ರಹಿಸಿತು.
ಜಯಂತಿ ಆಚರಣೆಗೆ ಸಂಬಂಧಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುದ್ರಿತ ಭಾವಚಿತ್ರಗಳು ಲಭ್ಯವಿದ್ದರೂ, ಅವುಗಳನ್ನು ಬಳಸದೆ, ತಾತ್ಕಾಲಿಕ ರೀತಿ ಆಚರಿಸುವ ನಿರ್ಧಾರ ಯಾಕೆ ತೆಗೆದುಕೊಳ್ಳಲಾಯಿತು? ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.
ಈ ಬಗ್ಗೆ ಸರ್ಕಾರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಜಿಲ್ಲಾ ಆಡಳಿತ, ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4