ನಮ್ಮತುಮಕೂರು ವಿಶೇಷ ವರದಿ:
ತುಮಕೂರು ಜಿಲ್ಲೆಯಲ್ಲಿ ಏನು ನಡೆಯುತ್ತಿದೆ? ದಲಿತರಿಗೆ ಸ್ಮಶಾನ ಇದೆ ಎನ್ನುವ ಜಿಲ್ಲಾಡಳಿತ, ಸ್ಮಶಾನಕ್ಕೆ ಮೂಲಭೂತ ಸೌಕರ್ಯವನ್ನೇ ಒದಗಿಸಿಲ್ಲ. ಒಂದು ಸ್ಮಶಾನಕ್ಕೆ ಮೂಲಭೂತ ಸೌಕರ್ಯ ಒದಗಿಸಲೂ ಸಾಧ್ಯವಾಗದಷ್ಟು ಜಿಲ್ಲಾಡಳಿತ ಗತಿಗೆಟ್ಟು ನಿಂತಿದ್ಯಾ? ಅನ್ನೋ ಪ್ರಶ್ನೆಗಳು ಸೃಷ್ಟಿಯಾಗಿವೆ. ಅಂತ್ಯಸಂಸ್ಕಾರ ಮಾಡಲಾಗಿದ್ದ ಮೃತದೇಹವನ್ನು ಮೃತರ ಕುಟುಂಬಸ್ಥರ ಗಮನಕ್ಕೂ ತಾರದೇ, ಮೃತದೇಹವನ್ನು ಹೊರತೆಗೆದು ಬೆಳ್ಳಂ ಬೆಳ್ಳಗೆ ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಮೃತದೇಹವನ್ನು ಸ್ಥಳಾಂತರಿಸಲು ಅಧಿಕಾರಿಗಳು ತೋರಿದ ಆತುರ, ಉತ್ಸಾಹ ದಲಿತರ ಸ್ಮಶಾನಕ್ಕೆ ಮೂಲಭೂತ ಸೌಕರ್ಯ ಒದಗಿಸುವಾಗ ಇರಲಿಲ್ಲವಲ್ಲ… ಅದೇ ನಿಜವಾದ ದುರಂತ, ನಾಚಿಕೆಗೇಡಿನ ಸಂಗತಿ.
ತುಮಕೂರು ತಾಲೂಕು ಉರ್ಡಿಗೆರೆ ಹೋಬಳಿದುರ್ಗದ ಹಳ್ಳಿ ಗ್ರಾಮಕ್ಕೆ ಜಿಲ್ಲಾಡಳಿತ ರುದ್ರಭೂಮಿಗೆಂದು 2 ಎಕರೆ ಜಮೀನು ಮಂಜೂರು ಮಾಡುತ್ತದೆ. ಈ ಜಾಗಕ್ಕೆ ಮೃತದೇಹಗಳನ್ನು ಕೊಂಡೊಯ್ಯಲು ಕನಿಷ್ಠ ಕಾಲು ದಾರಿಯೂ ಕೂಡ ಇರುವುದಿಲ್ಲ. ಗ್ರಾಮದ ಕೆಲವರಿಗೆ ಈ ರುದ್ರಭೂಮಿ ಎಲ್ಲಿದೆ ಎಂಬ ಮಾಹಿತಿಯೇ ಇಲ್ಲ. ಈ ಜಾಗದಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ಹೀಗಿರುವ ಮಧ್ಯೆ ಗ್ರಾಮದ ಡಿ.ಪಿ.ತಿಮ್ಮರಾಜು ಎಂಬವರು, ಅರೆಗುಜ್ಜನಹಳ್ಳಿ ಗ್ರಾಪಂ ಪಿಡಿಓ ಅವರಿಗೆ ಈ ರುದ್ರ ಭೂಮಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲು. ಆಗಸ್ಟ್ 2, 2022ನೇ ಸಾಲಿನಲ್ಲಿ ಲಿಖಿತವಾಗಿ ಮನವಿಯನ್ನು ನೀಡಿದ್ದಾರೆ. ಆದರೂ, ಗ್ರಾಮ ಪಂಚಾಯತ್ ನವರು, ಈ ರುದ್ರಭೂಮಿಗೆ ಕನಿಷ್ಠ ಕಾಲುದಾರಿಯೂ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿರುವುದಿಲ್ಲ. ಇತ್ತೀಚೆಗೆ ಸುಮಾರು 15 ದಿನಗಳ ಹಿಂದೆ, ಇದೇ ಗ್ರಾಮದ ತಿಮ್ಮರಾಜು ಎಂಬವರ ತಂದೆ ಪೆದ್ದಯ್ಯನವರು ಮೃತಪಟ್ಟಿರುತ್ತಾರೆ. ಮೃತಪಟ್ಟ ಇದೇ ದಿನ ಮೃತರ ಮಗ ತಿಮ್ಮರಾಜುರವರು, ತುಮಕೂರು ತಹಶೀಲ್ದಾರ್ ಸಿದ್ದೇಶ್ ಇವರಿಗೆ ದೂರವಾಣಿ ಕರೆ ಮಾಡಿ. ನಮ್ಮ ತಂದೆಯವರು ಮೃತಪಟ್ಟಿದ್ದು, ನಮ್ಮ ಗ್ರಾಮದಲ್ಲಿರುವ ರುದ್ರಭೂಮಿಗೆ ನಮ್ಮ ತಂದೆಯ ಮೃತಹದೇಹವನ್ನು ಕೊಂಡೊಯ್ಯಲು ಕಾಲು ದಾರಿ ಸಹ ಇರುವುದಿಲ್ಲ, ದಯವಿಟ್ಟು ನಮಗೆ ಈ ತಕ್ಷಣ ಮೃತದೇಹ ಹೂಳಲು ರುದ್ರಭೂಮಿಗೆ ಕನಿಷ್ಠ ಕಾಲುದಾರಿಯನ್ನು ಮಾಡಿಕೊಡಿ ಅಂತ ಗೋಗರೆದಿದ್ದಾರೆ. ಈ ವೇಳೆ ತಹಶೀಲ್ದಾರ್ ಅವರು, ಹಾರಿಕೆ ಉತ್ತರ ನೀಡಿ, ಫೋನ್ ಕರೆ ಸ್ಥಗಿತಗೊಳಿಸಿದ್ದಾರೆ.
ನಂತರದಲ್ಲಿ ದಿಕ್ಕು ಕಾಣದೇ ಈ ಕುಟುಂಬವು ಅನಿವಾರ್ಯವಾಗಿ ರಸ್ತೆ ಬದಿಯ ಜಮೀನುವೊಂದರಲ್ಲಿ ತಮ್ಮ ತಂದೆಯ ಮೃತದೇಹವನ್ನು ಅಂತ್ಯಸಂಸ್ಕಾರ ನಡೆಸಿದ್ದಾರೆ. ಇದಾದ ನಂತರ ದಿನಾಂಕ 5-1-2024ರಂದು ಬೆಳಗ್ಗೆ ಸುಮಾರು 6 ಗಂಟೆಯ ಸಮಯದಲ್ಲಿ ಏಕಾಏಕಿ ತುಮಕೂರು ತಹಶೀಲ್ದಾರ್, ಇತರೆ ಅಧಿಕಾರಿಗಳೊಂದಿಗೆ ರಸ್ತೆ ಬದಿಯಲ್ಲಿ ಹೂತಿದ್ದ ಪೆದ್ದಯ್ಯ ಅವರ ಮೃತದೇಹವನ್ನು ಈ ಕುಟುಂಬಸ್ಥರ ಗಮನಕ್ಕೆ ತರದೇ ಹೊರ ತೆಗೆದು ಸಾರ್ವಜನಿಕವಾಗಿ ಈ ಕುಟುಂಬಕ್ಕೆ ಅವಮಾನಿಸಿರುವುದಲ್ಲದೇ ಮೃತದೇಹಕ್ಕೆ ಕುಂದುಂಟು ಮಾಡಿದ್ದಾರೆ.
ಪೆದ್ದಯ್ಯನವರ ಕುಟುಂಬಕ್ಕೆ ಯಾವುದೇ ರಾಜಕೀಯ ಬಲವಿಲ್ಲ, ಹಣ ಬಲವಿಲ್ಲ. ಇವರ ಅಸಹಾಯಕತೆಯನ್ನು ತಿಳಿದು ಅಧಿಕಾರಿಗಳು ಸರ್ವಾಧಿಕಾರಿಗಳಂತೆ ವರ್ತಿಸಿದ್ದು, ಬೆಳ್ಳಂಬೆಳಗ್ಗೆ ಪೊಲೀಸರ ರಕ್ಷಣೆಯೊಂದಿಗೆ ಮೃತದೇಹವನ್ನು ಹೊರತೆಗೆದು ಬೇರೆಡೆ ಸ್ಥಳಾಂತರಿಸಿದ್ದಾರೆ. ಅಧಿಕಾರಿಗಳು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು, ಮೃತರ ಕುಟುಂಬಸ್ಥರಿಗೆ ಉದ್ದೇಶಪೂರ್ವಕವಾಗಿ ತೊಂದರೆ ನೀಡಿರುವುದು ಕಂಡು ಬಂದಿದೆ. ಜೊತೆಗೆ ದಲಿತರಾದ ಸಂತ್ರಸ್ತರ ಕುಟುಂಬದ ಘನತೆಯನ್ನೇ ಅವಮಾನಿಸಲಾಗಿದೆ.
ಈ ಬಗ್ಗೆ ದೂರು ಕೊಡಲೆಂದು ಮೃತರ ಹಿರಿಯ ಸೊಸೆ ಮಂಜುಳಾ ಅವರು ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಗೆ ತೆರಳಿದಾಗ ಸಬ್ ಇನ್ಸ್ ಪೆಕ್ಟರ್ ಚೇತನ್ ಕುಮಾರ್, ಸರ್ಕಲ್ ಇನ್ಸ್ ಪೆಕ್ಟರ್ ರಾಮ್ ಪ್ರಸಾದ್ ದೂರು ಸ್ವೀಕರಿಸದೇ ಕರ್ತವ್ಯ ಲೋಪ ಎಸಗಿದ್ದು, ನೊಂದ ಮಂಜುಳಾ ಅವರನ್ನು ವಾಪಸ್ ಕಳುಹಿಸಿದ್ದಾರೆ. ಹೀಗಾಗಿ ರಿಜಿಸ್ಟರ್ ಪೋಸ್ಟ್ ಮೂಲಕ ಪೊಲೀಸ್ ಉಪಾಧೀಕ್ಷಕರಿಗೆ ಮಂಜುಳ ಅವರು ದೂರು ನೀಡಿದ್ದು, ಅಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ.
ಉಪದ್ರವ ನಿವಾರಣಾ ಆದೇಶ!
ಎಸಿಯವರು ಉಪದ್ರವ ನಿವಾರಣಾ ಆದೇಶ ಹೊರಡಿಸಿ, ಮೃತದೇಹವನ್ನು ಬೇರೆಡೆಗೆ ಸ್ಥಳಾಂತರಗೊಳಿಸಿದ್ದಾರೆ. ಆದ್ರೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರು ಇತ್ತೀಚೆಗೆ ಈ ಘಟನೆಯ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದೇ ಬೇರೆ. “ಕುಟುಂಬಸ್ಥರು ಒಪ್ಪಿದರೆ ವ್ಯಕ್ತಿಯ ಮೃತದೇಹವನ್ನು ಹೊರತೆಗೆದು ಬೇರೆಡೆ ಅಂತ್ಯಸಂಸ್ಕಾರ ಮಾಡಿ” ಎಂದು ಪರಮೇಶ್ವರ್ ಸೂಚಿಸಿದ್ದರೆ, ಅಧಿಕಾರಿಗಳು ಉಪದ್ರವ ನಿವಾರಣಾ ಆದೇಶ ಹೊರಡಿಸಿ, ಕುಟುಂಬಸ್ಥರ ಒಪ್ಪಿಗೆ ಪಡೆಯದೇ ಬಲಾತ್ಕಾರವಾಗಿ ಮೃತದೇಹವನ್ನು ಬೇರೆಡೆಗೆ ಸ್ಥಳಾಂತರಗೊಳಿಸಿದ್ದಾರೆ ಎಂದು ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ರುದ್ರಭೂಮಿಗೆ ರಸ್ತೆ ಕಲ್ಪಿಸಿ ಸರ್ಕಾರಿ ಸೇವೆ ನೀಡದ, ದಲಿತರಿಗೆ ಅವಮಾನವಾಗುವಂತೆ ಹೂತಿದ್ದ ದೇಹ ಹೊರತೆಗೆದ ಅಧಿಕಾರಿಗಳ ವಿರುದ್ದ FIR ಮಾಡಿಸಲು ಬೆಂಗಳೂರಿನ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಅಧೀಕ್ಷಕರಿಗೆ ದೂರವಾಣಿ ಕರೆ ಮಾಡಿ ನಮ್ಮ ದಲಿತ ಕುಟುಂಬಕ್ಕೆ ನ್ಯಾಯ ಕೊಡಿಸಲು ಮನವಿ ಮಾಡಿದ ಮಂಜುಳ ಇವರಿಗೆ SP ರವರು ತುಮಕೂರು ಡಿಸಿ,ಎಸ್ ಪಿ ಹತ್ತಿರ ಹೋಗಿ ಎಂದು ಹಾರಿಕೆ ಉತ್ತರ ನೀಡಿರುತ್ತಾರೆ. ದಲಿತರಿಗೆ ನ್ಯಾಯ ಕೊಡಿಸಬೇಕಾದ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ ಈ ರೀತಿ ನಮಗೆ ನಡೆದು ಕೊಂಡರೆ ಮತ್ಯಾರಲ್ಲಿ ನಾವು ನ್ಯಾಯ ಕೇಳಬೇಕು ಇದು ಮಂಜುಳ ಇವರ ಅಳಲು.
ಈ ಬಗ್ಗೆ ಸರಿಯಾದ ಕಾನೂನು ಕ್ರಮಕೈಗೊಳ್ಳದೇ ಹೋದಲ್ಲಿ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ನೊಂದ ಕುಟುಂಬಸ್ಥರು ನಮ್ಮತುಮಕೂರಿಗೆ ತಿಳಿಸಿದ್ದಾರೆ.