ಕೊರಟಗೆರೆ: ಮತ ಚಲಾಯಿಸುವುದು ಕೇವಲ ನಿಮ್ಮ ಹಕ್ಕು ಮಾತ್ರವಲ್ಲ. ಅದು ದೇಶಕಟ್ಟುವ ನಿಟ್ಟಿನಲ್ಲಿ ಕರ್ತವ್ಯ ಕೂಡ ಆಗಿದೆ. ಜಗತ್ತಿನಲ್ಲೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪ್ಪಿಕೊಂಡ ದೊಡ್ಡ ದೇಶ ನಮ್ಮದು ಎಂದು ತಾ.ಪಂ. ಇ ಓ ಅಪೂರ್ವ ತಿಳಿಸಿದರು.
ಲೋಕಸಭಾ ಚುನಾವಣೆ ಅಂಗವಾಗಿ ಜಿಲ್ಲಾ ಸ್ವೀಪ್ ಸಮಿತಿ ಮತ್ತು ತಾಲೂಕು ಸ್ವೀಪ್ ಸಮಿತಿ, ಯೂತ್ ಫಾರ್ ಸೇವಾ ಸಂಸ್ಥೆ ಹಾಗೂ ಬೂದಗವಿ, ತುಂಬಾಡಿ, ತೋವಿನಕೆರೆ ಗ್ರಾ.ಪಂ. ಸಹಯೋಗದೊಂದಿಗೆ ಬೂದಗವಿ ಗ್ರಾಮ ಸೇರಿದಂತೆ ಸಿದ್ಧರಬೆಟ್ಟದ ಅರಣ್ಯ ಪ್ರದೇಶದಲ್ಲಿ ಸ್ವಚ್ಚತಾ ಅಭಿಯಾನದ ಮೂಲಕ ಏರ್ಪಡಿಸಲಾದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಬಾರಿ ಶೇ.100ರಷ್ಟು ಮತದಾನಕ್ಕೆ ಮುಂದಾಗಬೇಕಿದೆ. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ವ್ಯವಸ್ಥೆಯನ್ನು ಸುಧಾರಿಸುವ, ಅಭಿವೃದ್ಧಿಗಾಗಿ ಪೂರಕವಾಗಿ ಚುನಾವಣೆಗಳು ಅತಿ ಮಹತ್ತರ ಪಾತ್ರ ವಹಿಸುತ್ತವೆ. ಮತದಾರರು ಪ್ರಾಮಾಣಿಕ, ನ್ಯಾಯಸಮ್ಮತ, ನಿಷ್ಪಕ್ಷಪಾತವಾಗಿ ಮತದಾನ ಮಾಡಬೇಕು. ಪ್ರತಿಯೊಬ್ಬರು ಮತದಾನ ಮಾಡಿದಾಗ ಮಾತ್ರ ಸುಭದ್ರ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು.
ಏ.26 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡುವಂತೆ ಮತದಾರರಿಂದ ಪ್ರತಿಜ್ಞಾವಿಧಿಯನ್ನು ಭೋಧಿಸಿದರು. ಬೂದಗವಿ ಗ್ರಾಮ ಪಂಚಾಯಿತಿ ಆವರಣದಿಂದ ಬೂದಗವಿ ಗ್ರಾಮದ ಪ್ರತಿ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿ ನಮ್ಮ ಮನೆ ನಮ್ಮ ಗ್ರಾಮ ಎಂಬ ಭಾವನೆಯನ್ನು ಬೆಳೆಸಿಕೊಂಡು ಪರಿಸರ ಮಾಲಿನ್ಯಕ್ಕೆ ಮಾರಕವಾದಂತಹ ವಸ್ತುಗಳನ್ನು ಸ್ವಚ್ಛಗೊಳಿಸಿ ಉತ್ತಮ ಆರೋಗ್ಯಕರ ವಾತಾವರಣವನ್ನು ಕಂಡುಕೊಳ್ಳಿ ಎಂದು ಹೇಳುವುದರ ಜೊತೆಗೆ ಕಡ್ಡಾಯವಾಗಿ ಮತದಾನ ಮಾಡುವಂತೆ ತಾಲೂಕು ಸ್ವೀಪ್ ಸಮಿತಿ ತಿಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು, ಬೂದಗವಿ ಮತ್ತು ತುಂಬಾಡಿ-ತೋವಿನಕೆರೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು, ಸ್ವಸಹಾಯ ಸಂಘದ ಮಹಿಳೆಯರು, ನರೇಗಾ ಹಾಗೂ ತಾ.ಪಂ ಮತ್ತು ಗ್ರಾ.ಪಂ ಸಿಬ್ಬಂದಿ ಸೇರಿದಂತೆ ಇತರರು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296