ಮುಂಬೈ: ವಾಘ್ ಬಕ್ರಿ ಟೀ ಗ್ರೂಪ್‌ನ ಉನ್ನತ ಕಾರ್ಯನಿರ್ವಾಹಕ ಉದ್ಯಮಿ ಪರಾಗ್ ದೇಸಾಯಿ ಅವರು ತಮ್ಮ ನಿವಾಸದ ಹೊರಗೆ ಬೀದಿ ನಾಯಿಗಳ ದಾಳಿಯಿಂದ ಭಾನುವಾರ ನಿಧನರಾದರು.
ವಾಘ್ ಬಕ್ರಿ ಟೀ ಗ್ರೂಪ್ ನ ನಿರ್ದೇಶಕ, ಉನ್ನತ ಕಾರ್ಯನಿರ್ವಾಹಕ ಪರಾಗ್ ದೇಸಾಯಿ ಅವರು ತಮ್ಮ ನಿವಾಸದ ಹೊರಗೆ ಅಕ್ಟೋಬರ್ 15ರಂದು ಬೀದಿ ನಾಯಿಗಳಿಂದ ತೀವ್ರ ದಾಳಿಗೆ ಒಳಗಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ನಿಧನರಾದರು. ಅವರಿಗೆ 49 ವರ್ಷ ವಯಸ್ಸಾಗಿತ್ತು.
ಪರಾಗ್ ಅವರು 1892 ರಲ್ಲಿ ನಾರಂದಾಸ್ ದೇಸಾಯಿ ಸ್ಥಾಪಿಸಿದ ಕಂಪನಿಯ ವ್ಯವಹಾರಗಳನ್ನು ನಿರ್ವಹಿಸುವ ದೇಸಾಯಿ ಕುಟುಂಬದ ನಾಲ್ಕನೇ ತಲೆಮಾರಿನ ಸದಸ್ಯರಾಗಿದ್ದರು.
ದೇಸಾಯಿ ಅವರು 30 ವರ್ಷಗಳ ಉದ್ಯಮಶೀಲತೆಯ ಅನುಭವ ಹೊಂದಿದ್ದಾರೆ. ಗ್ರೂಪ್‌ನ ಅಂತಾರಾಷ್ಟ್ರೀಯ ವ್ಯಾಪಾರ, ಮಾರಾಟ ಮತ್ತು ಮಾರ್ಕೆಟಿಂಗ್ ಅನ್ನು ಮುನ್ನಡೆಸಿದ್ದಾರೆ. ಅವರು ಭಾರತೀಯ ಕೈಗಾರಿಕೆಗಳ ಒಕ್ಕೂಟ (CII) ನಂತಹ ಪ್ರಮುಖ ಉದ್ಯಮ ವೇದಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಅವರು ಅಮೆರಿಕದ ಲಾಂಗ್ ಐಲ್ಯಾಂಡ್ ವಿವಿಯಿಂದ ಎಂಬಿಎ ಪದವಿ ಪಡೆದವರು. ವಾಘ್ ಬಕ್ರಿ ಕಂಪನಿ 1500 ಕೋಟಿ ರೂ.ಗಳ ವ್ಯವಹಾರ ಹೊಂದಿದೆ.
ಪರಾಗ್ ಅವರನ್ನು ಕಳೆದ ವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ಪರಾಗ್ ದೇಸಾಯಿ ಅವರು ತಮ್ಮ ನಿವಾಸದ ಹೊರಗೆ ಬೀದಿ ನಾಯಿಗಳ ದಾಳಿಯಿಂದ ತಲೆಗೆ ತೀವ್ರ ಪೆಟ್ಟಾಗಿ ಚಿಕಿತ್ಸೆ ಪಡೆಯುತ್ತಿದ್ದರು. ದೇಸಾಯಿ ಅವರನ್ನು ಶಸ್ತ್ರಚಿಕಿತ್ಸೆಗಾಗಿ ಝೈಡಸ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆದರೆ, ಚಿಕಿತ್ಸೆ ವೇಳೆ ಮಿದುಳು ರಕ್ತಸ್ರಾವಕ್ಕೆ ಒಳಗಾಗಿ ಅವರು ಭಾನುವಾರ ಮೃತಪಟ್ಟಿದ್ದಾರೆ.
ದೇಸಾಯಿ ಅವರು ವಾಘ್ ಬಕ್ರಿ ಟೀ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾದ ರಸೇಶ್ ದೇಸಾಯಿ ಅವರ ಪುತ್ರ. ಅವರು ಪತ್ನಿ ವಿದಿಶಾ ಮತ್ತು ಮಗಳು ಪರಿಶಾ ಅವರನ್ನು ಅಗಲಿದ್ದಾರೆ.