ಬೆಂಗಳೂರು : ರಾಮನಗರವನ್ನು ಮಾದರಿ ಜಿಲ್ಲೆಯಾಗಿ ಮಾಡಲು ನಾವು ಸಂಕಲ್ಪ ಮಾಡಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ರಾಮನಗರ ಜಿಲ್ಲೆಗೆ ನೂತನ ಅಶ್ವಮೇಧ ಬಸ್ ಗಳ ಸಂಚಾರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಮನಗರ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ ಮಾಡಲು ಡಿ.ಕೆ.ಸುರೇಶ್ ಅವರು ಸಂಕಲ್ಪ ಮಾಡಿದ್ದಾರೆ. ಅವರ ಯೋಜನೆಗಳನ್ನು ಜಾರಿಗೊಳಿಸಲು ನಾನು, ಇಕ್ಬಾಲ್ ಹುಸೇನ್, ಬಾಲಕೃಷ್ಣ, ರವಿ ಅವರು ಸಂಪೂರ್ಣ ಸಹಕಾರ ನೀಡುತ್ತೇವೆ. ಬಿಡದಿ ಪ್ರಾಧಿಕಾರವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿ ಪರಿವರ್ತಿಸುತ್ತಿದ್ದೇವೆ. ಬಿಡದಿ ಹಾಗೂ ಆನೇಕಲ್ ವರೆಗೂ ಮೆಟ್ರೋ ವಿಸ್ತರಿಸಲು ಡಿಪಿಆರ್ ಸಿದ್ಧಪಡಿಸಲು ಸೂಚಿಸಿದ್ದೇನೆ. ರಾಮನಗರ ಜಿಲ್ಲೆಗೆ ಯಾವ ಯಾವ ಇಲಾಖೆಗಳಲ್ಲಿ ಏನೆಲ್ಲಾ ಯೋಜನೆಗಳನ್ನು ಸಿದ್ಧಪಡಿಸುತ್ತಿದ್ದೇವೆ ಎಂದು ಮುಂದಿನ ದಿನಗಳಲ್ಲಿ ಪ್ರತ್ಯೇಕವಾಗಿ ತಿಳಿಸುತ್ತೇನೆ ಎಂದು ಅವರು ತಿಳಿಸಿದರು.
ರಾಮನಗರ ಜಿಲ್ಲೆಯವರು ಬೆಂಗಳೂರಿನವರೇ ಆಗಿದ್ದಾರೆ. ಕೆಂಗಲ್ ಹನುಮಂತಯ್ಯ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು, ಶ್ರೀ ಶಿವಕುಮಾರ ಸ್ವಾಮೀಜಿಗಳು ಇದೇ ಜಿಲ್ಲೆಯವರು. ನಾವೆಲ್ಲರೂ ಬೆಂಗಳೂರಿನ ಭಾಗ. ಈ ವಿಚಾರವಾಗಿ ಚುನಾವಣೆ ನಂತರ ಚರ್ಚೆ ಮಾಡಿ ರೂಪುರೇಷೆ ನೀಡುತ್ತೇನೆ ಎಂದರು.