ತುಮಕೂರು:ಪ್ರಜಾಪ್ರಭುತ್ವದ ಕಾಳಜಿಗಳ, ಅಸ್ಮಿತೆಯ, ಬಹುತ್ವದ ಹಾಗೂ ಸಂಯುಕ್ತರಾಜಕಾರಣದ ಬಿಕ್ಕಟ್ಟನ್ನುಎದುರಿಸುತ್ತಿದ್ದೇವೆ. ಊಳಿಗಮಾನ್ಯ ಪದ್ಧತಿಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿರುವುದುದುರ್ದೈವದ ಸಂಗತಿ ಎಂದು ಹಿರಿಯ ಸಾಹಿತಿ ಪ್ರೊ. ಬರಗೂರುರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕರ್ನಾಟಕ ರಾಜ್ಯ ರಾಜ್ಯಶಾಸ್ತ್ರ ಶಿಕ್ಷಕರ ಸಂಘ, ತುಮಕೂರು ವಿವಿ ರಾಜ್ಯಶಾಸ್ತ್ರ ಶಿಕ್ಷಕರ ಅಕಾಡೆಮಿ, ಸ್ನಾತಕೋತ್ತರ ರಾಜ್ಯ ಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗ ಹಾಗೂ ಸ್ನಾತಕೋತ್ತರ ಸಾರ್ವಜನಿಕ ಆಡಳಿತ ಅಧ್ಯಯನ ಮತ್ತು ಸಂಶೋಧನ ವಿಭಾಗದ ಸಹಯೋಗದಲ್ಲಿ ಆಯೋಜಿಸಿರುವ ‘ಭಾರತೀಯ ಪ್ರಜಾಪ್ರಭುತ್ವದ ಕಾಳಜಿಗಳು: ಅಸ್ಮಿತೆ, ಬಹುತ್ವ ಹಾಗೂ ಸಂಯುಕ್ತರಾಜಕಾರಣ’ ವಿಷಯದ ಕುರಿತ ಎರಡು ದಿನಗಳ 20ನೆಯ ಕರ್ನಾಟಕ ರಾಜ್ಯ ರಾಜ್ಯಶಾಸ್ತ್ರ ಶಿಕ್ಷಕರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ದೇಶದ ಹಿತಚಿಂತನೆಯು ಪಕ್ಷದಿಂದ ನಾಯಕರ ಹಿತಚಿಂತನೆಗೆ ಇಳಿದಿದೆ. ವ್ಯಕ್ತಿಗತ ರಾಜಕಾರಣ ಎಂದಿಗೂ ಅಸಮಾನತೆಯನ್ನುತೋರಿಸುತ್ತದೆ. ಸರ್ಕಾರವನ್ನು, ದುರಾಡಳಿತವನ್ನು ಟೀಕಿಸಿದರೆ ದೇಶವನ್ನು ಟೀಕಿಸಿದಂತೆ ಎಂದು, ದೇಶ ವಿರೋಧಿ ಚಟುವಟಿಕೆಯ ಕಾನೂನಿನ ಅಡಿಯಲ್ಲಿ ಬಂಧಿಸುತ್ತಾರೆ. ನಾಯಕತ್ವಏಕತ್ವವಾಗಿ ಸರ್ವಾಧಿಕಾರ ತಲೆದೂರಿದೆ. ಬಹುತ್ವದ ನಾಯಕತ್ವ ಇಂದಿನ ಅಗತ್ಯವಾಗಿದೆ. ನಾಯಕನಲ್ಲಿ ಬಹುತ್ವಜೀವಿಸಬೇಕು ಎಂದರು.
ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಯ ಮುಖವನ್ನು ಪ್ರಕಟಿಸಿ ಚುನಾವಣೆಗಳನ್ನು ಎದುರಿಸುತ್ತಿರುವುದು ಸಂಸದೀಯ ಪ್ರಜಾಪ್ರಭುತ್ವವೇ? ಈ ನಡೆ ಶಾಸಕರ ಮತ್ತು ಸಂಸದರ ಹಕ್ಕಿಗೆ ಚ್ಯುತಿತಂದಂತೆ. ಇದನ್ನು ಪ್ರಜೆಗಳು ಹಾಗೂ ಮಾಧ್ಯಮದವರು ಪ್ರಶ್ನಿಸುತ್ತಿಲ್ಲವೇಕೆ? ವ್ಯಕ್ತಿ ಪೂಜೆಯಲ್ಲಿ ನಿರತರಾಗಿರುವ ಪ್ರಜೆಗಳಿಗೆ ಉಳಿಗಾಲವಿಲ್ಲ ಎಂದು ತಿಳಿಸಿದರು.
ತಾತ್ವಿಕ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು, ಜನಪ್ರತಿನಿಧಿಗಳು ಬದುಕುತ್ತಿಲ್ಲ. ಬೌದ್ಧಿಕ ವಲಯದ ವಿಭಜಿತರೂಪವು ವಿರಾಟರೂಪ ತಾಳಿದೆ. ಸೈದ್ಧಾಂತಿಕ ಬದ್ಧತೆಯೊಂದಿಗೆ ಸಂವಹನ, ಸಂವಾದವಿರಬೇಕು. ಜಾತಿ, ಧರ್ಮವುರಾಜಕೀಯ ನೆಲೆಯಲ್ಲಿ ದ್ವೇಷಕ್ಕೆ ಕಾರಣವಾಗುತ್ತಿದೆ. ದ್ವೇಷೋತ್ಪಾದನೆಯ ದೇಶವಾಗಿ ಭಾರತ ಬದಲಾಗುತ್ತಿದೆ. ನುಡಿ ನೈತಿಕತೆಯ ನಾಶದ ಸಂದರ್ಭದಲ್ಲಿದ್ದೇವೆ. ಪ್ರಜಾಪ್ರಭುತ್ವದ ಪರಿಭಾಷೆಯನ್ನು ಮರೆತಿದ್ದೇವೆ ಎಂದರು.
ಶಾಸಕರು ಹಾಗೂ ಸಂಸದರು ಜನಪ್ರತಿನಿಧಿಗಳ ಮಟ್ಟದಿಂದ ಸಂಖ್ಯೆಯ ಮಟ್ಟಕ್ಕೆ ಇಳಿದಿರುವುದು ಪ್ರಜಾಪ್ರಭುತ್ವದ ಅವನತಿ. ರಾಜಕೀಯ ಸಾಕ್ಷರತೆ ಇಲ್ಲದವನೇ ನಿಜವಾದ ಅನಕ್ಷರಸ್ಥ. ಪಂಚೇದ್ರಿಯಗಳು ಮಲಿನವಾಗಿರುವ ಸಂದರ್ಭದಲ್ಲಿ ಅಸ್ಪೃಶ್ಯತೆಯು ತಾಂಡವವಾಡುತ್ತಿದೆ ಎಂದರು.
ಕರ್ನಾಟಕ ರಾಜ್ಯ ರಾಜ್ಯಶಾಸ್ತ್ರ ಶಿಕ್ಷಕರ ಸಂಘದ ಸಂಸ್ಥಾಪಕ ಕಾರ್ಯದರ್ಶಿ ಪ್ರೊ.ಜಯಪ್ರಕಾಶ್ ಮಾವಿನಕುಳಿ, ತುಮಕೂರು ವಿವಿ ರಾಜ್ಯಶಾಸ್ತ್ರ ಶಿಕ್ಷಕರ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಪ್ರೊ.ಲಿಂಗರಾಜು ಬಿ.ಎಸ್., ತುಮಕೂರು ವಿವಿ ರಾಜ್ಯಶಾಸ್ತ್ರ ಶಿಕ್ಷಕರ ಅಕಾಡೆಮಿಯಅಧ್ಯಕ್ಷ ಡಾ.ಟಿ.ಜಿ.ನಾಗಭೂಷಣ, ಉಪಾಧ್ಯಾಕ್ಷ ಡಾ. ಹೊನ್ನಾಂಜನೇಯ, ಕಾರ್ಯಕಾರಿ ಸಮಿತಿ ಸದಸ್ಯ ಪ್ರೊ. ಶಿವಾನಂದಯ್ಯ, ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್ ಕೆ., ಕಾಲೇಜು ಶಿಕ್ಷಣ ಇಲಾಖೆಯಜಂಟಿ ನಿರ್ದೇಶಕ ಪ್ರೊ.ರಾಮಕೃಷ್ಣರೆಡ್ಡಿ, ಸಮ್ಮೇಳದ ಅಧ್ಯಕ್ಷ ಪ್ರೊ.ಬಸವರಾಜ ಜಿ., ಸಂಘಟನಾ ಕಾರ್ಯದರ್ಶಿಗಳಾದ ಡಾ.ನಾಗರಾಜು ಎಂ.ಎಸ್., ಡಾ. ಕೆ. ಸಿ. ಸುರೇಶ, ಕೋಶಾಧಿಕಾರಿ ಡಾ. ಮಂಜುನಾಥ್ ಆರ್. ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx