- ಆನಂದ ವಿ.ಕೆ.
ಗಂಡ ತನ್ನ ದೇಹ ಬಯಕೆಯನ್ನು ಈಡೇರಿಸಿಕೊಳ್ಳಲು ಮಾತ್ರವೇ ತನ್ನನ್ನು ಬಳಕೆ ಮಾಡಿಕೊಳ್ಳುತ್ತಿದ್ದಾನೆ, ಆತನಿಗೆ ತನ್ನ ಮೇಲೆ ನಿಜವಾದ ಪ್ರೀತಿ ಇಲ್ಲ ಎನ್ನುವುದು ಸಾಕಷ್ಟು ಮಹಿಳೆಯರ ಮೂಕರೋದನೆಯಾಗಿರುತ್ತದೆ. ಈ ರೀತಿಯ ಮನೋಭಾವನೆಗಳು ಸಂಗಾತಿಗಳ ನಡುವೆ ಅಂತರವನ್ನು ಸೃಷ್ಟಿಸಲು, ಪರಸ್ಪರ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಲು ಕಾರಣವಾಗಬಹುದು.
ದಾಂಪತ್ಯ ಜೀವನದಲ್ಲಿ ಲೈಂಗಿಕ ಕ್ರಿಯೆ ಎನ್ನುವುದು ಪ್ರಕೃತಿಯ ನಿಯಮದಂತೆ ನಡೆಯಬೇಕು. ಗಂಡು ಹೆಣ್ಣಿನ ಮಿಲನ ಪರಸ್ಪರ ದೈಹಿಕ ಸುಖದ ಕಾಮನೆಗಳನ್ನು ಈಡೇರಿಸಿಕೊಳ್ಳುವ ಕ್ರಿಯೆ ಆಗಿದ್ದರೂ, ಆ ವಿಚಾರದಲ್ಲಿ ಹೆಣ್ಣಿಗಾಗಲಿ ಗಂಡಿಗಾಗಲಿ ವಿರಸ ಮೂಡುವಂತಿರಬಾರದು. ಈ ವಿಚಾರದಲ್ಲಿ ಗಂಡಸರು ಹೆಚ್ಚು ಕಾಳಜಿ ವಹಿಸಬೇಕು.
ಸಾಮಾನ್ಯವಾಗಿ ಎಲ್ಲ ವಿಚಾರಗಳಲ್ಲೂ ಗಂಡಿಗಿಂತ ಹೆಣ್ಣಿಗೆ ಹೊತ್ತು ಗೊತ್ತಿನ ಕಲ್ಪನೆ ಇರುತ್ತದೆ. ಹೆಣ್ಣು ರತಿಕ್ರಿಯೆ ಬೇಡ ಎಂದು ಹೇಳಲು ನಾನಾ ಕಾರಣಗಳಿರುತ್ತವೆ. ಆದರೆ ಆಕೆಗೂ ರತಿಕ್ರಿಯೆಯ ಆಕಾಂಕ್ಷೆಗಳು ಇರುತ್ತವೆ. ಆದರೆ, ಆಕೆ ಕೆಲವೊಂದು ಸಮಯದಲ್ಲಿ ವಿವೇಚನೆಯಿಂದ ರತಿಕ್ರಿಯೆಯನ್ನು ನಿರಾಕರಿಸಬಹುದು. ಆ ಸಂದರ್ಭದಲ್ಲಿ ಗಂಡು ಆಕೆಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ.
ಮನೆ ಕೆಲಸಗಳ ಒತ್ತಡ ಅಥವಾ ನೆಂಟರಿಷ್ಟರು ಮನೆಗೆ ಆಗಮಿಸಿದ ಸಂದರ್ಭಗಳು ಅಥವಾ ಅನಾರೋಗ್ಯಗಳ ಕಾರಣಗಳಿಂದ ಮಹಿಳೆ ರತಿಕ್ರಿಯೆಗೆ ನಿರಾಕರಿಸಿದರೆ, ಗಂಡನಾದವನು ತಾಳ್ಮೆಯಿಂದ ಕಾಯಬೇಕು. ಪತ್ನಿಯ ಅಂಗಾಂಗಗಳು ಉದ್ರೇಕಿಸುವಂತೆ ಕಂಡರೂ ಪತಿಯಾದವನು ಬಲವಂತವಾಗಿ ಆಕೆಯ ಜೊತೆಗೆ ಕೂಡಲು ಪ್ರಯತ್ನಿಸಬಾರದು. ಈ ರೀತಿ ಮಾಡಿದರೆ, ತನ್ನ ಪತಿ ತನ್ನ ದೇಹವನ್ನು ಮಾತ್ರವೇ ಬಯಸುತ್ತಾನೆ. ಆತನಿಗೆ ನನ್ನ ಮೇಲೆ ಪ್ರೀತಿ ಇಲ್ಲ ಎಂದು ಅನ್ನಿಸಬಹುದು.
ಬಲವಂತದ ಕೂಡುವಿಕೆ, ಎಂದಿಗೂ ಪತ್ನಿಗೆ ಖುಷಿಯುಂಟು ಮಾಡಲಾರದು, ಬದಲಾಗಿ ತನ್ನ ಪತಿಯ ಬಗ್ಗೆ ಅಸಹ್ಯ ಭಾವನೆ ಮೂಡಿಸಬಹುದು, ಸಂಬಂಧದಲ್ಲಿ ಬಿರುಕು ಮೂಡಲು ಇಷ್ಟು ಕಾರಣ ಸಾಕಲ್ಲವೇ? ಇದಕ್ಕಾಗಿಯೇ ಹಿರಿಯರು ಕೂಡಿ ಬಾಳಿದರೆ ಸ್ವರ್ಗ ಸುಖ ಎಂದು ಕರೆದಿರೋದು.