ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿರುವ ‘ಭೀಮ’ ಸಿನಿಮಾ ನಿನ್ನೆ (ಆಗಸ್ಟ್ 09) ರಾಜ್ಯದಾದ್ಯಂತ ಬಿಡುಗಡೆ ಆಗಿದೆ. ದುನಿಯಾ ವಿಜಯ್ ನಿರ್ದೇಶನ ಮಾಡಿರುವ ಎರಡನೇ ಸಿನಿಮಾ ಇದು. ಬಿಡುಗಡೆ ಆದ ಮೊದಲ ದಿನ ಮಿಶ್ರ ಪ್ರತಿಕ್ರಿಯೆಗಳನ್ನು ಈ ಸಿನಿಮಾ ಪಡೆದುಕೊಂಡಿದೆ.
ಪ್ರೇಕ್ಷಕರು ‘ಸಲಗ’ದೊಂದಿಗೆ ಹೋಲಿಸಿ ನೋಡುತ್ತಿದ್ದಾರೆ. ಪತ್ರಿಕೆಗಳಲ್ಲಿ ನೆಗೆಟಿವ್ ವಿಮರ್ಶೆಗಳು ಪ್ರಕಟವಾಗಿವೆ. ಇದರ ನಡುವೆಯೂ ಉತ್ತಮ ಮೊತ್ತವನ್ನೇ ‘ಭೀಮ’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕಲೆ ಹಾಕಿದೆ. ಸುಮಾರು 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಿದ್ದು, ಮೊದಲ ದಿನ ಸುಮಾರು 9 ರಿಂದ 10 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಮೊದಲ ದಿನ 9-10 ಕೋಟಿ ಗಳಿಕೆ ಮಾಡಿರುವುದು ‘ಭೀಮ’ ಪಾಲಿಗೆ ಬಹಳ ಒಳ್ಳೆಯ ಮೊತ್ತವೇ ಆಗಿದೆ.
‘ಭೀಮ’ ಸಿನಿಮಾ, ಡ್ರಗ್ಸ್ ವಿರುದ್ಧ ನಿಲವು ತಳೆದ ಲೋಕಲ್ ರೌಡಿಯೊಬ್ಬನ ಕತೆ ಒಳಗೊಂಡಿದೆ. ಬೆಂಗಳೂರಿನಲ್ಲಿ ಗಾಂಜಾ ಹೇಗೆ ಪ್ರಸಾರ ಆಗುತ್ತಿದೆ, ಹೇಗೆ ಯುವಕರು ನಶೆಯ ಜಾಲದೊಳಕ್ಕೆ ಬೀಳುತ್ತಿದ್ದಾರೆ ಎಂಬುದನ್ನು ತೋರಿಸುವ ಪ್ರಯತ್ನವನ್ನು ದುನಿಯಾ ವಿಜಯ್ ಮಾಡಿದ್ದಾರೆ. ಆದರೆ ಸಿನಿಮಾ ನೋಡಿದ ಮಂದಿ ‘ಸಲಗ’ ಸಿನಿಮಾದೊಂದಿಗೆ ಹೋಲಿಸುತ್ತಿದ್ದು, ‘ಸಲಗ’ದಷ್ಟು ಸಿನಿಮಾ ಚೆನ್ನಾಗಿಲ್ಲ ಎನ್ನುತ್ತಿದ್ದಾರೆ.
ಶ್ರೀಮಂತ ಮತ್ತು ಬಡ ಯುವಕರು ಗಾಂಜಾ ಅಮಲಿಗೆ ಬಲಿಯಾಗುತ್ತಿರುವುದು, ಅದನ್ನು ತಡೆಗಟ್ಟಲು ನಾಯಕನ ಹೋರಾಟ. ನಾಯಕನ ಈ ಹೋರಾಟದಲ್ಲಿ ರಕ್ತಪಾತ ಯಥೇಚ್ಚವಾಗಿದೆ, ಕೆಲವೊಮ್ಮೆ ಚಿತ್ರ ಪರದೆಯ ಮೇಲೆ ರಕ್ತ ಚಿಮ್ಮುವಂತೆ ಭಾಸವಾಗುತ್ತದೆ. ಇನ್ನೂ ಅವ್ಯಾಚ್ಯ ಶಬ್ದಗಳ ಬಳಕೆಯಂತೂ ನಿರರ್ಗಳವಾಗಿದೆ. ಎಲ್ಲಾ ಪಾತ್ರಗಳು ಅದನ್ನೂ ಮ್ಯಾಂಡೇಟ್ ಎನ್ನುವಂತೆ ಸಿನಿಮಾದಲ್ಲಿ ಬೈಗುಳಗಳನ್ನು ಬಳಸಿದ್ದು ಕೇಳುವವರಿಗೆ ಕರ್ಣ ಕಠೋರವಾಗಿದೆ.
ಇನ್ನು ಕೆಲವೆಡೆ ಅನಗತ್ಯ ಹೊಡೆದಾಟ ಬಡಿದಾಟದ ದೃಶ್ಯಗಳಿವೆ, ಪೈಟಿಂಗ್ ಸೀನ್ ನಲ್ಲಿ ಶಾಲೆ– ಕಾಲೇಜು ಯುವಕರು ಕತ್ತಿ ಹಿಡಿವ ದೃಶ್ಯ ನೋಡುವಾಗ ಸಿನಿಮಾದಲ್ಲಿ ಕ್ರೌರ್ಯ ತುಂಬಿ ತುಳುಕುತ್ತಿದೆ ಎನ್ನಿಸುತ್ತದೆ. ಸಮಾಜದಲ್ಲಿ ನಡೆಯುತ್ತಿರುವ ಕೆಲವು ನೈಜ ಘಟನೆಗಳ ಬಗ್ಗೆ ಸಿನಿಮಾದಲ್ಲಿ ತೋರಿಸಲಾಗಿದೆ, ನಾಗರಿಕ ಸಮಾಜದಲ್ಲಿ ಬದುಕುತ್ತಿರುವ ನಾವು ಈ ಪ್ರವೃತ್ತಿಗಳ ಬಗ್ಗೆ ಯೋಚನೆ ಮಾಡುವಂತಾಗುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296