ಮುಡಾ ಹಗರಣ ಚರ್ಚೆ ರಾಜ್ಯದಲ್ಲಿ ಜೋರಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ದಲ್ಲಿ ಸುಮಾರು 5000 ಕೋಟಿ ರೂಗೂ ಅಧಿಕ ಮೊತ್ತದ ಅವ್ಯವಹಾರ ನಡೆದಿದೆ ಎಂದು ಹೇಳಲಾಗಿದ್ದು ಈ ವಿಚಾರವಾಗಿ ಘಟಾನುಘಟಿಗಳ ಹೆಸರು ಕೇಳಿಬಂದಿದೆ.
ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಬಿಜೆಪಿ ಮುಗಿಬಿದ್ದ ಬೆನ್ನಲ್ಲೇ ಇದರ ತನಿಖೆಗಾಗಿ ಸರ್ಕಾರ ಸಮಿತಿಯನ್ನೂ ರಚಿಸಿ 15 ದಿನಗಳೊಳಗೆ ವರದಿ ನೀಡುವಂತೆ ಆದೇಶ ನೀಡಿದೆ. ಅಷ್ಟೇ ಅಲ್ಲ ಮುಡಾ ಹಗರಣ ವಿಚಾರವು ಇದೀಗ ಗೂಗಲ್ ನಲ್ಲಿ ಸಹ ಟ್ರೆಂಡ್ ಆಗಿದೆ. ಕರ್ನಾಟಕದಲ್ಲಿ ಇದು ಶೇಕಡಾ 100ರಷ್ಟು ಅಂತಾರ್ಜಾಲ ಬಳಕೆದಾರರು ಸರ್ಚ್ ಕೊಟ್ಟಿದ್ದರೆ, ಉತ್ತರ ಭಾರತದ ಹಿಮಾಚಲ ಪ್ರದೇಶದಲ್ಲೂ ಶೇಕಡಾ 30ರಷ್ಚು ನೆಟ್ಟಿಗರು ಈ ಬಗ್ಗೆ ಜಾಲಾಡಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ವಿಚಾರದಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ. 50-50 ಅನುಪಾತದಡಿ ಸರಿಯಾಗಿ ಹಂಚಿಕೆ ಮಾಡದೆ ಬೇಕಾಬಿಟ್ಟಿ ಹಂಚಿಕೆ ಮಾಡಲಾಗಿದ್ದು ಅಂದಾಜು 5 ಸಾವಿರ ಕೋಟಿಯಷ್ಟು ಭಾರೀ ಅಕ್ರಮ ನಡೆದಿದೆ ಎಂದು ಹೇಳಲಾಗುತ್ತಿದೆ.
50-50 ಅನುಪಾತ ಅವ್ಯವಹಾರವೇನು?
ಯಾವುದೇ ಒಂದು ಬಡಾವಣೆ ನಿರ್ಮಾಣ ಮಾಡುವಾಗ ನಗರಾಭಿವೃದ್ಧಿ ಪ್ರಾಧಿಕಾರಿಗಳು ರೈತರನ್ನು ಒಪ್ಪಿಸಿ ಭೂಸ್ವಾಧೀನ ಮಾಡಬೇಕಾಗುತ್ತದೆ. ಹೀಗೆ ಮಾಡುವ ಸಂದರ್ಭದಲ್ಲಿ ರೈತರಿಗೆ ಪರಿಹಾರ ರೂಪದಲ್ಲಿ ಭೂಮಿಯ ಮೌಲ್ಯದಷ್ಟೇ ಹಣವನ್ನು ಅಥವಾ ಲೇಔಟ್ ಮಾಡುವಾಗ ಶೇ 50ರಷ್ಟು ನಿವೇಶನಗಳನ್ನು ನೀಡಬೇಕೆಂಬ ಒಪ್ಪಂದವಾಗುತ್ತದೆ. ಇವೆರಡೂ ಅಲ್ಲದಿದ್ದರೆ ವಶಪಡಿಸಿಕೊಂಡ ಭೂಮಿಯ ಮೌಲ್ಯದಷ್ಟೇ ಭೂಮಿಯನ್ನು ಇನ್ನೊಂದು ಕಡೆ ಗುರುತು ಮಾಡಿ ನೀಡುವುದು ಪ್ರಾಧಿಕಾರದ ಹೊಣೆಗಾರಿಕೆಯಾಗಿರುತ್ತದೆ.
ಆದರೆ ಮೈಸೂರಿನಲ್ಲಿ ನಿರ್ಮಿಸಲ್ಪಟ್ಟ ಬಡಾವಣೆಗಳಲ್ಲಿ ಆ ರೀತಿ ಯಾವುದೇ ಮಾನದಂಡವನ್ನು ಅನುಸರಿಸಲಾಗಿಲ್ಲ ಎಂಬುದು ಈಗ ಕೇಳಿ ಬಂದಿರುವ ಆರೋಪವಾಗಿದೆ. ಹಲವಾರು ಪ್ರಕಣದಲ್ಲಿ ಭೂ ಮಾಲೀಕರಿಗೆ ಪರಿಹಾರ ನೀಡಿಲ್ಲ. ಶೇಕಡಾ 50ರಷ್ಟು ನಿವೇಶನಗಳನ್ನೂ ನೀಡಿಲ್ಲ, ಬೇರೆಡೆ ಭೂಮಿಯನ್ನೂ ನಿಗದಿಪಡಿಸಿಲ್ಲ. ಅದಕ್ಕೆ ಬದಲಾಗಿ ಅರ್ಜಿಗಳಲ್ಲಿನ ಹಿರಿತನ ಪರಿಗಣಿಸದೆ ಅಕ್ರಮವಾಗಿ ಸೈಟ್ ಗಳನ್ನು ನೀಡಲಾಗಿದೆ ಎಂಬುದು ಕೇಳಿ ಬಂದಿರುವ ಆರೋಪವಾಗಿದೆ.
ಸಿದ್ದರಾಮಯ್ಯ ಅವರ ಆಪ್ತನಿಂದ ಮುಡಾಗೆ ಈ ಗತಿ ಬಂದಿದೆ. ಡಾ ಯತೀಂದ್ರ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸುಮಾರು 5 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆದಿದೆ ಎಂದು ದೂರಿದ್ದಾರೆ. 2019ರಲ್ಲಿ ಮುಡಾ ವಶದಲ್ಲಿದ್ದ 9000 ನಿವೇಶನಗಳಲ್ಲಿ 5000ಕ್ಕೂ ಅಧಿಕ ನಿವೇಶನಗಳನ್ನು ಕಾನೂನುಬಾಹಿರವಾಗಿ ಹಂಚಿಕೆ ಮಾಡಲಾಗಿದೆ ಎಂದಿದ್ದಾರೆ. ಜೊತೆಗೆ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಹೆಸರಿನಲ್ಲೂ ನಿವೇಶನ ವರ್ಗಾವಣೆ ಕಾರ್ಯ ನಡೆದಿದ್ದು ಯತೀಂದ್ರ ಸಿದ್ದರಾಮಯ್ಯ ಅವರೇ ಮುಂದೆ ನಿಂತು ಇದನ್ನು ಮಾಡಿಸಿದ್ದಾರೆ ಎಂಬ ಮಾತು ಕೇಳಿಬರುತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


