ರಕ್ಷಾ ಬಂಧನದಂದು ಸಹೋದರಿ ತನ್ನ ಸಹೋದರನಿಗೆ ರಕ್ಷೆ ದಾರ ಅಥವಾ ರಾಖಿಯನ್ನ ಕಟ್ಟಿ, ಅವನ ರಕ್ಷಣೆ ಸದಾ ತನ್ನ ಮೇಲಿರಲಿ ಎಂದು ಕೋರುತ್ತಾಳೆ. ಅದಕ್ಕೆ ಪ್ರತಿಯಾಗಿ ಸಹೋದರ..ತನ್ನ ಸಹೋದರಿಗೆ ಎಂದೆಂದಿಗೂ ಜೊತೆಗೆ ಇರುವ..ರಕ್ಷಣೆ ಮಾಡುವ ಭರವಸೆಯನ್ನ ಕೊಡುತ್ತಾನೆ. ಅಂದಹಾಗೇ, ಈ ಸಲ ರಕ್ಷಾ ಬಂಧನ ಹಬ್ಬ ಯಾವಾಗ? ಇತಿಹಾಸ ಏನು?
ರಕ್ಷಾ ಬಂಧನ ಹಬ್ಬವನ್ನ ಈ ಸಲ ಆಗಸ್ಟ್ 19, ಸೋಮವಾರ ಆಚರಣೆ ಮಾಡಲಾಗುತ್ತಿದೆ. ಶ್ರಾವಣ ಮಾಸದ ಹುಣ್ಣಿಮೆಗೆ ವಿಶೇಷ ಪ್ರಾಶಸ್ತ್ಯವಿದ್ದು, ಅತ್ಯಂತ ಶುಭ ದಿನ ಎಂದು ಪರಿಗಣಿಸಲಾಗುತ್ತದೆ. ರಕ್ಷಾ ಬಂಧನ ಹಬ್ಬ ಪ್ರಾಮುಖ್ಯತೆ ಪಡೆದಿದ್ದು ಸುಮಾರು 16ನೇ ಶತಮಾನದಲ್ಲಿಯೇ ಆದರೂ, ನಿಜವಾಗಿ ರಕ್ಷಾ ಬಂಧನ ಶುರುವಾಗಿದ್ದು ಮಹಾಭಾರತ ಕಾಲದಿಂದ ಎಂದು ಹಿಂದುಗಳು ನಂಬುತ್ತಾರೆ. ಇದನ್ನು ಪ್ರಾರಂಭಿಸಿದ್ದು ಶ್ರೀಕೃಷ್ಣ ಎನ್ನಲಾಗುತ್ತದೆ…ಈ ಚೆಂದದ ಕಥೆ ಹೀಗಿದೆ ಓದಿ..
ʼಶ್ರೀ ಕೃಷ್ಣ, ಪಾಂಡವರು ಎಲ್ಲ ಒಟ್ಟಿಗೆ ಇದ್ದ ಸಂದರ್ಭದಲ್ಲಿ ಭಗವಂತ ಶ್ರೀಕೃಷ್ಣ ಗಾಳಿಪಟ ಹಾರಿಸುತ್ತಿರುತ್ತಾನೆ . ಆಗ ಗಾಳಿಪಟಕ್ಕೆ ಕಟ್ಟಿದ ನೂಲು ಕೃಷ್ಣನ ಬೆರಳನ್ನು ಕೊರೆಯುತ್ತದೆ. ಆ ಬೆರಳಿನಿಂದ ರಕ್ತ ಸುರಿಯಲು ಪ್ರಾರಂಭವಾಗುತ್ತದೆ. ಅದನ್ನ ನೋಡಿದ ದ್ರೌಪದಿ (ಪಾಂಡವರ ಪತ್ನಿ) ತುಂಬ ಸಂಕಟದಿಂದ ಕೃಷ್ಣನ ಬಳಿ ಬಂದು ತಾನು ಉಟ್ಟಿದ್ದ ಸೀರೆಯ ಸೆರಗನ್ನೇ ಸ್ವಲ್ಪ ಕತ್ತರಿಸಿ ಕೃಷ್ಣನ ಬೆರಳಿಗೆ ಕಟ್ಟುತ್ತಾಳೆ. ಆಗ ರಕ್ತ ಸುರಿಯುವುದು ನಿಲ್ಲುತ್ತದೆ. ಇದರಿಂದ ಶ್ರೀಕೃಷ್ಣನಿಗೆ ತುಂಬ ಸಂತೋಷ ಆಗುತ್ತದೆ.
ದ್ರೌಪದಿ ತನಗೆ ಕಟ್ಟಿದ ಬಟ್ಟೆಯ ತುಂಡನ್ನು ʼರಕ್ಷಾ ಸೂತ್ರʼ ಎಂದು ಅವನು ಸ್ವೀಕರಿಸುತ್ತಾನೆ. ಹಾಗೇ, ದ್ರೌಪದಿಗೆ ಸದಾ ಕಾವಲು ಆಗಿರುವುದಾಗಿ ಭಾಷೆ ಕೊಡುತ್ತಾನೆ. ಅದರಂತೆ ದುರ್ಯೋಧನನ ತಮ್ಮ ದುಶ್ಯಾಸನ, ಎಲ್ಲರ ಎದುರು ದ್ರೌಪದಿಯ ಮಾನಭಂಗ ಮಾಡಲು ಯತ್ನಿಸಿದಾಗ ಕೃಷ್ಣ ಕಾಪಾಡುತ್ತಾನೆ. ಮಹಾಭಾರತದ ಕಥೆ ಓದಿದವರಿಗೆ ಶ್ರೀಕೃಷ್ಣ ಹೇಗೆಲ್ಲ ದ್ರೌಪದಿಯ ರಕ್ಷಣೆ ಮಾಡಿದ್ದಾನೆ ಎಂಬುದು ಗೊತ್ತೇ ಇರುತ್ತದೆ. ರಕ್ಷಾ ಬಂಧನ ಎನ್ನುವುದು ಹುಟ್ಟಿ, ಅದು ಅಣ್ಣ-ತಂಗಿಯರ ಬಾಂಧವ್ಯದ ಹಬ್ಬವಾಗಿದ್ದು ಹೀಗೆ..ಎನ್ನುತ್ತದೆ ಪುರಾಣ.. ರಕ್ಷಾ ಬಂಧನದ ಬಗ್ಗೆ ಇನ್ನೂ ಹಲವು ಬಗೆಯ ಕಥೆಗಳು ಇವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


