ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಬಿ ನಾಗೇಂದ್ರ ಪತ್ನಿ ಮಂಜುಳಾರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸದಿಂದಲೇ ವಶಕ್ಕೆ ಪಡೆದು ವಿಚಾರಣೆಗೆ ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಗೆ ಕರೆದೊಯ್ದಿದ್ದಾರೆ. ಆರೋಪಿಗಳ ಹೇಳಿಕೆ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿ ತಿಳಿಸಿದೆ. ವಾಲ್ಮೀಕಿ ನಿಗಮದಿಂದ ಹಲವಾರು ಕೋಟಿ ರೂಪಾಯಿ ಅಕ್ರಮ ವ್ಯವಹಾರಲ್ಲಿ ಹಲವಾರು ಬ್ಯಾಂಕ್ ಖಾತೆಗಳಿಗೆ ಬೇನಾಮಿಯಾಗಿ ಹಣ ವರ್ಗಾವಣೆಯಾಗಿದೆ.
ಈಗಾಗಲೇ ಬಂಧನಕ್ಕೆ ಒಳಗಾಗಿರುವ ನಾಗೇಂದ್ರರ ಬ್ಯಾಂಕ್ ಖಾತೆ ಜೊತೆ ಕುಟುಂಬಸ್ಥರ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಪತ್ನಿಯ ಖಾತೆಯಿಂದ ಹೆಚ್ಚು ಹಣ ವರ್ಗಾವಣೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಈ ಕಾರಣಕ್ಕೆ ಇಡಿ ಅಧಿಕಾರಿಗಳು ಮಂಜುಳಾರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಇಡಿ ಅಧಿಕಾರಿಗಳು ವಾಲ್ಮೀಕಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರರ ಮನೆ ಮೇಲೆ ದಾಳಿ ಮಾಡಿ ಶೋಧ ಕಾರ್ಯ ನಡೆಸಿ ನಾಗೇಂದ್ರರನ್ನು ಬಂಧಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


