ಸರಗೂರು: ಮಹಿಳೆಯರು ಮುಂಜಾಗೃತ ಕ್ರಮವಾಗಿ ಗ್ಯಾಸ್ ಸುರಕ್ಷತಾ ಕ್ರಮ ಅನುಸರಿಸಿಕೊಂಡು ಅಡುಗೆ ಮಾಡಬೇಕು ಎಂದು ಸೌಜನ್ಯ ಗ್ಯಾಸ್ ಏಜೆನ್ಸಿಯ ಮಾಲೀಕರು, ಮಾಜಿ ಸಚಿವ ಎಂ.ಶಿವಣ್ಣ ಸಲಹೆ ನೀಡಿದರು.
ಪಟ್ಟಣದ ಸೌಜನ್ಯ ಗ್ಯಾಸ್ ಸರ್ವೀಸ್ ನಿಂದ ಭಾರತ್ ಗ್ಯಾಸ್ ಏಜೆನ್ಸಿ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಶನಿವಾರ ನಡೆಸಿದ ಗ್ಯಾಸ್ ಬಳಕೆಯ ಮುಂಜಾಗೃತ ಕ್ರಮ, ಗೃಹಿಣಿಯರಿಗೆ ಅಡುಗೆ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮನೆಗಳಲ್ಲಿ ಅಡುಗೆ ಕೋಣೆ ಸ್ವಚ್ಛವಾಗಿಟ್ಟುಕೊಂಡು ಗಾಳಿ, ಬೆಳಕು ಇರಬೇಕು. ಸಿಲಿಂಡರ್, ರೆಗ್ಯುಲೇಟರ್, ಗ್ಯಾಸ್ ಸ್ಟವ್ ಗಳಲ್ಲಿ ಲೋಪವಾದರೆ ಶೀಘ್ರದಲ್ಲೆ ಕ್ರಮವಹಿಸಬೇಕು. ಇದಕ್ಕಾಗಿ ಗ್ಯಾಸ್ ವಿತರಕರನ್ನು ಸಂಪರ್ಕಿಸಬೇಕು. ಕೂಡಲೇ ಸರಿಪಡಿಸಲಿದ್ದಾರೆ. ಗ್ರಾಹಕರ ಹಿತ ಕಾಪಾಡುವುದು ನಮ್ಮ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಗ್ರಾಹಕರು ಮುಂದಾಗಬೇಕು ಎಂದು ಅವರು ತಿಳಿಸಿದರು.
ಗ್ರಾಮಾಂತರ ಭಾಗದ ಜನರಿಗೆ ಗ್ಯಾಸ್ ಸೇವೆ ನೀಡುವ ಸಲುವಾಗಿ 25 ವರ್ಷಗಳ ಹಿಂದೆ ಆರಂಭವಾದ ಸೌಜನ್ಯ ಗ್ಯಾಸ್ ಸರ್ವೀಸ್ ಉತ್ತಮ ಸೇವೆ ನೀಡುತ್ತಾ ಬಂದಿದೆ. ಸದ್ಯ 15 ಸಾವಿರ ಗ್ರಾಹಕರನ್ನು ಹೊಂದಿದ್ದು, ಸೇವೆಯಲ್ಲಿ ಹೆಸರು ಮಾಡಿದೆ. ಕನೆಕ್ಷನ್ ನಲ್ಲಿ ಶೇ.100 ರಷ್ಟು ತಲುಪಿದೆ. ಮುಂದಿನ ದಿನಗಳಲ್ಲಿಯೂ ಉತ್ತಮ ಸೇವೆ ನೀಡಲು ಸಜ್ಜಾಗಿದೆ ಎಂದು ಅವರು ಹೇಳಿದರು.
ಗ್ಯಾಸ್ ಏಜೆನ್ಸಿಯ ಸಹ ಮಾಲೀಕರಾದ ಹರ್ಷವರ್ಧನ್ ಶಿವಣ್ಣ ಮಾತನಾಡಿ, ಸೌದೆ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುತ್ತಿತ್ತು. ಇದನ್ನು ಮನಗಂಡ ಸರಕಾರ ಅಡುಗೆಗಾಗಿ ಗ್ಯಾಸ್ ನೀಡಲು ಮುಂದಾಯಿತು. ಅದರಂತೆ ಗ್ರಾಹಕರು ಗ್ಯಾಸ್ ಸಂಪರ್ಕ ಹೊಂದಿದ್ದಾರೆ. ಹೀಗಾಗಿ ಗ್ರಾಹಕರು ಗ್ಯಾಸ್ ಸುರಕ್ಷತಾ ಅನುಸರಿಸುವುದು ಸೂಕ್ತವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಗೃಹಿಣಿಯರಿಗೆ ಅಡುಗೆ ಸ್ಪರ್ಧೆ ಆಯೋಜಿಸಿದ್ದು, ವಿಜೇತರಾದವರಿಗೆ ಭಾರತ್ ಪೆಟ್ರೋಲಿಯಂನ ಸೇಲ್ಸ್ ಮ್ಯಾನೇಜರ್ ಬಿಸೋಜ ಸೈವನ್ ಬಹುಮಾನ ವಿತರಿಸಿದರು. ನಿತ್ಯ ಪ್ರಥಮ (5000 ರೂ), ನಾಗೇಶ್ವರಿ ದ್ವಿತೀಯ (3000 ರೂ), ಭವ್ಯ ತೃತೀಯ(2000 ರೂ.) ಸ್ಥಾನ ಪಡೆದರೆ ಇನ್ನುಳಿದವರಿಗೆ ಸಮಾಧಾನಕಾರ ಬಹುಮಾನ ವಿತರಿಸಲಾಯಿತು. ಗ್ಯಾಸ್ ಸಿಬ್ಬಂದಿಯೊಬ್ಬರು ಮಹಿಳೆಯರು ಗ್ಯಾಸ್ ಸುರಕ್ಷತಾ ಕ್ರಮವನ್ನು ಹೇಗೆ ಅನುಸರಿಸಬೇಕು. ಮುಂಜಾಗೃತ ಕ್ರಮಗಳೇನು? ಎಂಬುದರ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸುವ ಮೂಲಕ ಅರಿವು ಮೂಡಿಸಿದರು.
ತೀರ್ಪುಗಾರರಾದ ಬಸವರಾಜಪ್ಪ, ಚಿಕ್ಕಳ್ಳಿ ಪುಟ್ಟಣ್ಣ, ಒಡೆಯರ್ ಪಾಳ್ಯದ ನಂಜಪ್ಪ ಅವರನ್ನು ಸನ್ಮಾನಿಸಲಾಯಿತು. ಸೌಜನ್ಯ ಗ್ಯಾಸ್ ಏಜೆನ್ಸಿ ಸಹ ಮಾಲೀಕರಾದ ಹರ್ಷವರ್ಧನ್, ಸೇಲ್ಸ್ ಮ್ಯಾನೇಜರ್ ಸೌಜನ್ಯ ಶಿವಣ್ಣ, ದೇವಿಕಾ ಶಿವಣ್ಣ, ಶಬ್ದವೇಧಿ ಚಂದ್ರಶೇಖರ್, ಬಿ.ವಿ.ಬಸವರಾಜು, ಬಿ.ಪಿ.ಬೋರೇಗೌಡ, ಬಿ.ಸಿ.ಬಸಪ್ಪ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ, ಕಸಾಪ ಅಧ್ಯಕ್ಷ ಕೆಂಡಗಣ್ಣಸ್ವಾಮಿ, ತೋಗಟವೀರ ಸಮಾಜದ ಅಧ್ಯಕ್ಷ ರವೀಂದ್ರ, ರವಿ, ಸಿಬ್ಬಂದಿಗಳಾದ ಪ್ರಸಾದ್, ಸೋಮಶೇಖರ್, ಮಹಿಳೆ ಗ್ರಾಹಕರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC