ತುಮಕೂರು: ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಸುರಕ್ಷತೆ ಹಾಗೂ ಸಬಲೀಕರಣದ ಉದ್ದೇಶದಿಂದ ತುಮಕೂರು ನಗರ ಪೊಲೀಸ್ ಇಲಾಖೆಯ ‘ಅಕ್ಕಪಡೆ’ ತಂಡ ನಗರದಾದ್ಯಂತ ವಿಶೇಷ ಜಾಗೃತಿ ಅಭಿಯಾನವನ್ನು ನಿರಂತರವಾಗಿ ನಡೆಸುತ್ತಿದೆ.
ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಖ್ಯ ನೇತೃತ್ವದಲ್ಲಿ, ಗೃಹ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿ ಸಹಯೋಗದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ತಕ್ಷಣದ ರಕ್ಷಣೆ ಒದಗಿಸುವುದರ ಜೊತೆಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ, ತುಮಕೂರು ವಿಶ್ವವಿದ್ಯಾನಿಲಯದ ಮುಂಭಾಗ, ಗೆದ್ದಲಹಳ್ಳಿ ಸಿಗ್ನಲ್, ಜಿಲ್ಲಾ ಆಸ್ಪತ್ರೆ ಹಾಗೂ ಮಾರುಕಟ್ಟೆ ಪ್ರದೇಶ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಅಕ್ಕಪಡೆ ವಾಹನಗಳು ದಿನವೂ ಸಂಚರಿಸುತ್ತಿವೆ. ಕಾಲೇಜಿಗೆ ತೆರಳುವ ವಿದ್ಯಾರ್ಥಿನಿಯರು ಮತ್ತು ಹಾಸ್ಟೆಲ್‌ಗಳಲ್ಲಿ ವಾಸಿಸುವ ಹೆಣ್ಣುಮಕ್ಕಳ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಸಂಜೆ ವೇಳೆಯಲ್ಲಿ ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಸಿಬ್ಬಂದಿ ಕಾಲ್ನಡಿಗೆಯಲ್ಲಿ ಗಸ್ತು ತಿರುಗಿ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ನಿಗಾ ವಹಿಸುತ್ತಿದ್ದಾರೆ.
ಅಭಿಯಾನದ ವೇಳೆ ಅಕ್ಕಪಡೆ ಸಿಬ್ಬಂದಿ ಮಹಿಳೆಯರಿಗೆ ಕಿರುಕುಳ ನೀಡುವವರ ವಿರುದ್ಧ ಕಾನೂನಿನಲ್ಲಿ ಇರುವ ಕಠಿಣ ಶಿಕ್ಷೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ದೌರ್ಜನ್ಯ, ಅಶ್ಲೀಲ ವರ್ತನೆ, ಬೆದರಿಕೆ ಕರೆಗಳು ಹಾಗೂ ಆನ್‌ಲೈನ್ ಕಿರುಕುಳದಂತಹ ಪ್ರಕರಣಗಳಲ್ಲಿ ತಕ್ಷಣ ದೂರು ನೀಡುವಂತೆ ತಿಳಿಸುತ್ತಿದ್ದಾರೆ. ವಿದ್ಯಾರ್ಥಿನಿಯರ ಫೋನ್‌ನಲ್ಲಿ 112 — ಏಕೀಕೃತ ತುರ್ತು ಸಹಾಯವಾಣಿ ಮತ್ತು 1098 — ಮಕ್ಕಳ ಸಹಾಯವಾಣಿ ಸಂಖ್ಯೆಗಳನ್ನು “Akkapade Tumkur” ಎಂದು ಸೇವ್ ಮಾಡಿಸಲಾಗುತ್ತಿದೆ.
“ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದೇ ನಮ್ಮ ಪ್ರಮುಖ ಕರ್ತವ್ಯ” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಅನುಮಾನ ಕಂಡುಬಂದಲ್ಲಿ ಅಥವಾ ತೊಂದರೆಯಾದಲ್ಲಿ ಅಕ್ಕಪಡೆ ವಾಹನದ ಮೇಲಿರುವ ಸಂಪರ್ಕ ಸಂಖ್ಯೆಗೆ ತಕ್ಷಣ ಕರೆ ಮಾಡುವಂತೆ ಮನವಿ ಮಾಡಿದ್ದಾರೆ.
ಮಹಿಳಾ ಸುರಕ್ಷತೆಗಾಗಿ ಅಕ್ಕಪಡೆ ಮಾಡುತ್ತಿರುವ ಕೆಲಸಕ್ಕೆ ತುಮಕೂರಿನ ಜನ, ವಿಶೇಷವಾಗಿ ಕಾಲೇಜು ವಿದ್ಯಾರ್ಥಿನಿಯರು ಮತ್ತು ಪೋಷಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇಂತಹ ಜಾಗೃತಿ ಕಾರ್ಯಕ್ರಮಗಳು ಮುಂದುವರಿಯಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ವರದಿ: ನಂದೀಶ್ ನಾಯ್ಕ ಪಿ., ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


