ತಿಪಟೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ತಿಪಟೂರು ಗ್ರಾಮಾಂತರ ಹಾಗೂ ಬೆಳಗರಹಳ್ಳಿಯ ಡಾ. ಅಂಬೇಡ್ಕರ್ ಗ್ರಾಮಾಂತರ ಪ್ರೌಢಶಾಲೆಯ ಜಂಟಿ ಸಹಭಾಗಿತ್ವದಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಪರಿಸರ ಜಾಗೃತಿ, ಮಾಹಿತಿ ಹಾಗೂ ಗಿಡ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನೊಣವಿನಕೆರೆ ವಲಯದ ಹೆಡಗರಹಳ್ಳಿ ಕಾರ್ಯಕ್ಷೇತ್ರಕ್ಕೆ ಒಳಪಡುವ ಬೆಳಗರಹಳ್ಳಿಯ ಡಾ. ಅಂಬೇಡ್ಕರ್ ಗ್ರಾಮಾಂತರ ಪ್ರೌಢಶಾಲೆಯ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಗಣ್ಯರ ಉಪಸ್ಥಿತಿಯಲ್ಲಿ ಸಾಂಕೇತಿಕವಾಗಿ ಗಿಡನಾಟಿ ಮಾಡುವ ಮೂಲಕ ಚಾಲನೆ ನೀಡಲಾಯಿತು. 2026ನೇ ಸಾಲಿನ ವಿಶ್ವ ಪರಿಸರ ದಿನಾಚರಣೆಯ ಘೋಷವಾಕ್ಯವಾದ “ಪ್ರಕೃತಿಯಿಂದ ಪ್ರೇರಿತ ಹವಾಮಾನಕ್ಕಾಗಿ, ನಮ್ಮ ಭವಿಷ್ಯಕ್ಕಾಗಿ” ಎಂಬ ಆಶಯದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯರಾದ ಯುವರಾಜ್ ಅವರು, “ಆಡು ಮುಟ್ಟದ ಸೊಪ್ಪಿಲ್ಲ, ಪೂಜ್ಯ ಖಾವಂದರು ಯೋಜಿಸದ ಕಾರ್ಯಕ್ರಮವಿಲ್ಲ” ಎಂದು ಧರ್ಮಸ್ಥಳದ ಪೂಜ್ಯ ಹೆಗ್ಗಡೆಯವರ ಪರಿಸರ ಕಾಳಜಿಯನ್ನು ಶ್ಲಾಘಿಸಿದರು. ಮುಂದುವರಿದು ಮಾತನಾಡಿದ ಅವರು, “ಪಳೆಯುಳಿಕೆ ಇಂಧನ ಮುಕ್ತ ವಾಹನಗಳ ಬಳಕೆ, ರಾಸಾಯನಿಕ ಮುಕ್ತ ಕೃಷಿ ಪದ್ಧತಿ, ಹಸಿ ಮತ್ತು ಒಣ ಕಸದ ವೈಜ್ಞಾನಿಕ ಬೇರ್ಪಡಿಸುವಿಕೆ ಹಾಗೂ ಪ್ಲಾಸ್ಟಿಕ್ ಮುಕ್ತ ಬಳಕೆಯನ್ನು ರೂಢಿಸಿಕೊಳ್ಳುವುದರಿಂದ ಪರಿಸರ ಸಂರಕ್ಷಣೆಗೆ ದೊಡ್ಡ ಕೊಡುಗೆ ನೀಡಬಹುದು. ಇದು ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕಲ್ಪಿಸಲು ಸಹಕಾರಿಯಾಗುತ್ತದೆ” ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಾಲಾ ಮಕ್ಕಳಿಗೆ ಹಾಗೂ ಆಸಕ್ತ ಸ್ವಸಹಾಯ ಸಂಘಗಳ ಸದಸ್ಯರಿಗೆ ಉಪಯುಕ್ತವಾದ ನುಗ್ಗೆ, ಪಪಾಯ, ಮಾವು, ಕರಿಬೇವು ಹಾಗೂ ನಿಂಬೆ ಗಿಡಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರಾದ ದೇವಾನಂದ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕರಾದ ಮುನಿಕೃಷ್ಣ, ಕೃಷಿ ಮೇಲ್ವಿಚಾರಕರಾದ ಚಂದನ್, ಶಾಲೆಯ ಸಹಶಿಕ್ಷಕರು, ಸ್ವ-ಸಹಾಯ ಸಂಘಗಳ ಸದಸ್ಯರು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


