ನೀರಿನಲ್ಲಿ ಸರಿಯಾಗಿ ಕರಗದ ಮತ್ತು ಬಾವಿ, ಕೆರೆ, ಕುಂಟೆ, ಸರೋವರ, ನದಿ ನೀರನ್ನು ಕಲುಷಿತಗೊಳಿಸುವ ರಾಸಾಯನಿಕ ಬಣ್ಣ ಲೇಪಿತ, ಪಿಓಪಿ ಗಣಪತಿ ಮೂರ್ತಿಗಳ ತಯಾರಿಕೆ, ದಾಸ್ತಾನು ಮತ್ತು ಮಾರಾಟ ಮಾಡದಂತೆ ಜನಜಾಗೃತಿ ಮೂಡಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
ಕಲುಷಿತ ನೀರು ಸೇವನೆಯಿಂದ ರಾಜ್ಯದ ವಿವಿಧೆಡೆಗಳಲ್ಲಿ ಜೀವಹಾನಿಯೂ ಆಗಿದ್ದು, ಅಮೂಲ್ಯವಾದ ಜನ, ಜಾನುವಾರುಗಳ ಜೀವ ಉಳಿಸಲು ಮತ್ತು ಆರೋಗ್ಯ ರಕ್ಷಿಸಲು ಪಾಸ್ಟರ್ ಆಫ್ ಪ್ಯಾರೀಸ್ (ಪಿಓಪಿ)ನಿಂದ ತಯಾರಿಸಿದ ಹಾಗೂ ಲೋಹಯುಕ್ತ ಅಪಾಯಕಾರಿ ರಾಸಾಯನಿಕ ಬಣ್ಣ ಬಳಸಿದ ಮೂರ್ತಿಗಳ ತಯಾರಿಕೆ, ದಾಸ್ತಾನು, ಮಾರಾಟ ಮಾಡದಂತೆ ಜಾಗೃತಿ ಮೂಡಿಸಲು ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಿದ್ದಾರೆ.
ಹಬ್ಬಕ್ಕೆ ಇನ್ನೂ ಒಂದೂವರೆ ತಿಂಗಳು ಬಾಕಿ ಇದ್ದು, ಈಗಿನಿಂದಲೇ ಪಿಓಪಿ ಗೌರಿ, ಗಣಪತಿ ಮೂರ್ತಿಗಳನ್ನು ತಯಾರಿಸದಂತೆ, ಬೇರೆ ರಾಜ್ಯದಿಂದ ಮಾರುಕಟ್ಟೆ ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಲು ನಿರ್ದೇಶನ ನೀಡಿದ್ದಾರೆ. ಈ ಬಾರಿ ಸೆಪ್ಟೆಂಬರ್ 18ರಂದು ಸಂಭ್ರಮ ಸಡಗರದಿಂದ ಗಣೇಶ ಚತುರ್ಥಿ ಆಚರಿಸಲಾಗುತ್ತದೆ.
ನಮ್ಮ ಭಕ್ತಿ, ಭಾವ, ಸಂಪ್ರದಾಯಕ್ಕೆ ಚ್ಯುತಿ ಆಗದಂತೆ ಪರಿಸರ ಸ್ನೇಹಿ ಮಣ್ಣಿನ ಗೌರಿ, ಗಣಪತಿ ತಂದು ಪೂಜಿಸಿ ಹಬ್ಬ ಆಚರಿಸೋಣ. ಆದರೆ, ನಮ್ಮ ಆಚರಣೆಯಿಂದ ಜಲ, ನೆಲ, ಗಾಳಿ ಮತ್ತು ಪರಿಸರಕ್ಕೆ ಹಾನಿ ಆಗದಂತೆ ಎಚ್ಚರಿಕೆ ವಹಿಸೋಣ ಎಂದು ಈಶ್ವರ ಖಂಡ್ರೆ ರಾಜ್ಯದ ಜನತೆಯಲ್ಲಿ ಮುಂಚಿತವಾಗಿಯೇ ಮನವಿ ಮಾಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


