ತುಮಕೂರು: ಕಷ್ಟಪಟ್ಟು ದುಡಿದರೆ ಕನಸು ನನಸಾಗುತ್ತೆ ಅನ್ನೋದಕ್ಕೆ ವೈ.ಎನ್. ಹೊಸಕೋಟೆ ಶ್ರೀನಿವಾಸ್.ಬಿ. ಅವರು ಜೀವಂತ ಉದಾಹರಣೆ. ತಿಪಟೂರಿನ ಕಲ್ಪತರು ವಿದ್ಯಾ ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿ ತೋರಿಸುತ್ತಿರುವ ಅವರು, ಈಗ ಅಂತರರಾಷ್ಟ್ರೀಯ ಟ್ರ್ಯಾಕ್ ನಲ್ಲಿ ಭಾರತದ ಬಾವುಟ ಹಾರಿಸಿದ್ದಾರೆ.
ಜೂನ್ 5 ರಿಂದ 7 ರವರೆಗೆ ಮಲೇಷಿಯಾದ ಕೌಲಾಲಂಪುರ್ ನ ಯು.ಪಿ.ಎಂ. ಕ್ರೀಡಾಂಗಣದಲ್ಲಿ ನಡೆದ 38ನೇ ಮಲೇಷಿಯಾ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಓಪನ್ ಚಾಂಪಿಯನ್ ಶಿಪ್ ನಲ್ಲಿ ಶ್ರೀನಿವಾಸ್ ಅವರು ಸೌತ್ ಇಂಡಿಯಾ ಅಥ್ಲೆಟಿಕ್ಸ್ ಅಸೋಸಿಯೇಷನ್ ನಿಂದ ಆಯ್ಕೆಯಾಗಿ ಸ್ಪರ್ಧಿಸಿದರು. ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಸೇರಿ 28 ದೇಶಗಳ ಟಾಪ್ ಅಥ್ಲೀಟ್ ಗಳು ಪಾಲ್ಗೊಂಡಿದ್ದ ಈ ಪ್ರತಿಷ್ಠಿತ ಕೂಟದಲ್ಲಿ ಅವರು 100 ಮೀಟರ್, 200 ಮೀಟರ್, 400 ಮೀಟರ್ ಓಟ ಹಾಗೂ ತ್ರಿವಿಧ ಜಿಗಿತ — ನಾಲ್ಕು ವಿಭಿನ್ನ ಸ್ಪರ್ಧೆಗಳಲ್ಲಿ ಭಾಗವಹಿಸಿ ಎಲ್ಲದರಲ್ಲೂ ಕಂಚಿನ ಪದಕ ಗೆಲ್ಲುವ ಮೂಲಕ ಅಸಾಧ್ಯ ಸಾಧನೆ ಮಾಡಿದ್ದಾರೆ.
ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀನಿವಾಸ್ ಅವರು ಬೋಧನೆಯ ಜೊತೆಗೆ ತಮ್ಮ ಅಭ್ಯಾಸವನ್ನೂ ಮುಂದುವರೆಸಿಕೊಂಡು ಹೋಗುತ್ತಿರುವುದು ವಿಶೇಷ. “ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬೇಕು ಅಂದ್ರೆ ನಾವೇ ಮೊದಲು ಮೈದಾನದಲ್ಲಿ ಇಳಿಯಬೇಕು” ಅನ್ನೋದು ಅವರ ನಿಲುವು.
ಅವರ ಈ ಸಾಧನೆ ತಿಪಟೂರು ಮಾತ್ರವಲ್ಲ, ಇಡೀ ತುಮಕೂರು ಜಿಲ್ಲೆ ಹಾಗೂ ಕರ್ನಾಟಕಕ್ಕೆ ಹೆಮ್ಮೆ ತಂದಿದೆ. ಕಲ್ಪತರು ಸಂಸ್ಥೆಯ ಆಡಳಿತ ಮಂಡಳಿ, ಸಹೋದ್ಯೋಗಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ಕ್ರೀಡಾ ಪ್ರೇಮಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ನಾಲ್ಕು ವಿಭಿನ್ನ ಸ್ಪರ್ಧೆಯಲ್ಲಿ ಒಂದೇ ಕೂಟದಲ್ಲಿ ಪದಕ ಗೆದ್ದ ಕರ್ನಾಟಕದ ಅಪರೂಪದ ಅಥ್ಲೀಟ್ ಗಳಲ್ಲಿ ಶ್ರೀನಿವಾಸ್ ಕೂಡ ಒಬ್ಬರಾಗಿದ್ದಾರೆ.
ಗ್ರಾಮೀಣ ಭಾಗದ ಯುವಕರಿಗೆ ಕ್ರೀಡೆಯೇ ಜೀವನವಾಗಬಹುದು ಅನ್ನೋದಕ್ಕೆ ಶ್ರೀನಿವಾಸ್ ಅವರ ಸಾಧನೆ ಸ್ಪಷ್ಟ ಸಂದೇಶ ಕೊಟ್ಟಿದೆ.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


