ಬುಧವಾರ ಮಧ್ಯಾಹ್ನ ಹೆಲಿಕಾಪ್ಟರ್ ಅಪಘಾತದ ಸುದ್ದಿ ಕೇಳಿ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಕೆಲವು ಗಂಟೆಗಳ ನಂತರ ದಟ್ಟ ಮಂಜು, ಹೊಗೆ ತೆರವುಗೊಂಡಿತು. ಸತ್ಯ ಹೊರಬಂದ ನಂತರ ದೇಶದ ಜನರ ಕಣ್ಣಾಲಿಗಳು ತೇವವಾದವು. ಭಾರತೀಯ ಸೇನೆಗೆ ಸೇರಿದ ಎಂಐ-17 ಹೆಲಿಕಾಪ್ಟರ್ ತಮಿಳುನಾಡಿನ ಕಣ್ಣೂರಿನ ಅರಣ್ಯದಲ್ಲಿ ಪತನಗೊಂಡಿತು. ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ಈ ಅಪಘಾತದಲ್ಲಿ ರಕ್ಷಣಾ ಪಡೆಗಳ ಮೊದಲ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಮತ್ತು ಪತ್ನಿ ಮಧುಲಿಕಾ ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ.
ಬಿಪಿನ್ ಲಕ್ಷ್ಮಣ್ ಸಿಂಗ್ ರಾವತ್. ಜನರಲ್ ಬಿಪಿನ್ ರಾವತ್ ಎಂದು ನಮಗೆಲ್ಲ ಪರಿಚಯ.. ಜನರಲ್ ರಾವತ್ ಅವರು ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ಚೌಹಾನ್ ರಜಪೂತ್ ಕುಟುಂಬದಲ್ಲಿ 16 ಮಾರ್ಚ್ 1958 ರಂದು ಜನಿಸಿದರು. ಜನರಲ್ ರಾವತ್ ಅವರ ತಾಯಿ ಪರ್ಮಾರ್ ರಾಜವಂಶದವರು.
ಬಿಪಿನ್ ರಾವತ್ ಪೂರ್ವಜರು ಮಾಯಾಪುರ/ಹರಿದ್ದಾರ್ ನಿಂದ ಬಂದು ಗರ್ವಾಲ್ ನ ಪರ್ಸಾಯಿ ಗ್ರಾಮದಲ್ಲಿ ನೆಲೆಸಿದ್ದರು. ಅವರನ್ನು ಪರಸರ ರಾವತ್ ಎಂದು ಕರೆಯಲಾಗುತ್ತಿತ್ತು. ರಾವತ್ ಎಂದರೆ ಗರ್ವಾಲ್ ನ ಆಡಳಿತಗಾರರು ರಜಪೂತರಿಗೆ ನೀಡಿದ ಮಿಲಿಟರಿ ಬಿರುದು. ಅವರ ತಂದೆ ಲೆಫ್ಟಿನೆಂಟ್ ಜನರಲ್ ಲಕ್ಷ್ಮಣ್ ಸಿಂಗ್ ರಾವತ್ ಅವರು ಸೈನ್ಯದಿಂದ ಲೆಫ್ಟಿನೆಂಟ್ ಜನರಲ್ ಆಗಿ ನಿವೃತ್ತರಾದರು. ರಾವತ್ 1978 ರಲ್ಲಿ ಹನ್ನೊಂದನೇ ಗೂರ್ಖಾ ರೈಫಲ್ಸ್‌ನ 5 ನೇ ಬೆಟಾಲಿಯನ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಶಿಕ್ಷಣ ಮತ್ತು ವೃತ್ತಿ ರಾವತ್ ಡೆಹ್ರಾಡೂನ್‌ನ ಕ್ಯಾಂಬ್ರಿಯನ್ ಹಾಲ್ ಶಾಲೆ, ಶಿಮ್ಲಾದ ಸೇಂಟ್ ಎಡ್ವರ್ಡ್ ಶಾಲೆ ಮತ್ತು ಡೆಹ್ರಾಡೂನ್ ನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ವ್ಯಾಸಂಗ ಮಾಡಿದರು. ಇಲ್ಲಿ ಅವರಿಗೆ ‘ಸ್ವರ್ಡ್ ಆಫ್ ಆನರ್’ ನೀಡಲಾಯಿತು. ಅವರು ವೆಲ್ಲಿಂಗ್ಟನ್ ನ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜ್ ನ ಪದವೀಧರರಾಗಿದ್ದರು ಜೊತೆಗೆ ಯುಎಸ್‌ಎಯ ಫೋರ್ಟ್ ಲೀವೆನ್ ವರ್ತ್‌ನಲ್ಲಿರುವ ಹೈಯರ್ ಕಮಾಂಡ್ ಕೋರ್ಸ್‌ನಲ್ಲಿ ಪದವೀಧರರಾಗಿದ್ದರು. ಅವರು ಮದ್ರಾಸ್ ವಿಶ್ವವಿದ್ಯಾಲಯದಿಂದ ರಕ್ಷಣಾ ಅಧ್ಯಯನದಲ್ಲಿ ಎಂಫಿಲ್, ಮ್ಯಾನೇಜ್‌ಮೆಂಟ್ ನಲ್ಲಿ ಡಿಪ್ಲೊಮಾ ಮತ್ತು ಕಂಪ್ಯೂಟರ್ ಅಧ್ಯಯನದಲ್ಲಿ ಡಿಪ್ಲೊಮಾ ಮಾಡಿದ್ದಾರೆ. 2011 ರಲ್ಲಿ, ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾನಿಲಯ, ಮೀರತ್ ನಿಂದ ಅವರು ಮಿಲಿಟರಿ-ಮಾಧ್ಯಮ ಕಾರ್ಯತಂತ್ರದ ಅಧ್ಯಯನಗಳ ಸಂಶೋಧನೆಗಾಗಿ ಡಾಕ್ಟರೇಟ್ ಆಫ್ ಫಿಲಾಸಫಿಯನ್ನು ಪಡೆದರು.ಎರಡು ವರ್ಷಗಳ ಹಿಂದೆ ಸಿಡಿಎಸ್ ಆಯಿತು
ಮಾಜಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ (61) ಅವರು 2019 ರಲ್ಲಿ ದೇಶದ ಮೊದಲ ರಕ್ಷಣಾ ಸಿಬ್ಬಂದಿ (ಸಿಡಿಎಸ್) ಆಗಿ ನೇಮಕಗೊಂಡರು. ಅವರು 65 ವರ್ಷದವರೆಗೆ ಈ ಹುದ್ದೆಯಲ್ಲಿ ಇರಬೇಕಿತ್ತು. ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಲ್ಲಿ ಸರಿಯಾದ ಮತ್ತು ಪರಿಣಾಮಕಾರಿ ಸಮನ್ವಯವನ್ನ ಕೈಗೊಳ್ಳಲು ಈ ಹುದ್ದೆಯನ್ನು ರಚಿಸಲಾಗಿತ್ತು.
ರಾವತ್ ಡಿಸೆಂಬರ್ 1978 ರಲ್ಲಿ 11 ಗೂರ್ಖಾ ರೈಫಲ್ಸ್ ನಲ್ಲಿ ಅಧಿಕಾರಿಯಾಗಿ ನಿಯೋಜಿತರಾದರು. ಅವರು 31 ಡಿಸೆಂಬರ್ 2016 ರಂದು ಸೇನಾ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. ಪೂರ್ವ ವಲಯದಲ್ಲಿ ವಾಸ್ತವಿಕ ನಿಯಂತ್ರಣ ರೇಖೆ, ಕಾಶ್ಮೀರ ಕಣಿವೆ ಮತ್ತು ಈಶಾನ್ಯ ರಾಜ್ಯಗಳ ಗಡಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ವಿಶೇಷವೆಂದರೆ ರಾವತ್ ಅವರ ತಂದೆ ಕಾರ್ಯ ನಿರ್ವಹಿಸುತ್ತಿದ್ದ ಅದೇ ಘಟಕದಲ್ಲಿ (11 ಗೂರ್ಖಾ ರೈಫಲ್ಸ್) ಇವರನ್ನೂ ನಿಯೋಜಿಸಲಾಗಿತ್ತು.
ರಾವತ್ ಅವರು ಅಲಂಕರಿಸಿದ್ದ ಹುದ್ದೆಗಳು…
ಬ್ರಿಗೇಡ್ ಕಮಾಂಡರ್
ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ (GOC-C) ದಕ್ಷಿಣ ಕಮಾಂಡ್
ಜನರಲ್ ಸ್ಟಾಫ್ ಆಫೀಸರ್ ಗ್ರೇಡ್ 2, ಮಿಲಿಟರಿ ಕಾರ್ಯಾಚರಣೆಗಳ ನಿರ್ದೇಶನಾಲಯ
ಕರ್ನಲ್ ಮಿಲಿಟರಿ ಕಾರ್ಯದರ್ಶಿ ಮತ್ತು ಉಪ ಮಿಲಿಟರಿ ಕಾರ್ಯದರ್ಶಿ
ಜೂನಿಯರ್ ಕಮಾಂಡ್ ವಿಂಗ್‌ನಲ್ಲಿ ಹಿರಿಯ ಬೋಧಕ
ಕಮಾಂಡರ್ ಯುನೈಟೆಡ್ ನೇಷನ್ಸ್ ಪೀಸ್ ಕೀಪಿಂಗ್ ಫೋರ್ಸ್ ಬಹುರಾಷ್ಟ್ರೀಯ ಬ್ರಿಗೇಡ್
ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥ
ಸೇನಾ ಮುಖ್ಯಸ್ಥ
ರಕ್ಷಣಾ ಸಿಬ್ಬಂದಿ ಮುಖ್ಯಸ್ಥ
ರಾವತ್ ಅವರಿಗೆ ಒಲಿದು ಬಂದಿರುವ ಸೇನಾ ಗೌರವಗಳು…
ಪರಮ ವಿಶಿಷ್ಟ ಸೇವಾ ಪದಕ
ಉತ್ತಮ ಯುದ್ಧ ಸೇವಾ ಪದಕ
ಅತಿ ವಿಶಿಷ್ಟ ಸೇವಾ ಪದಕ
ಯುದ್ಧ ಸೇವಾ ಪದಕ
ಸೇನಾ ಪದಕ
ಜನರಲ್ ರಾವತ್ ಅವರು ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿ ಕೆಲಸ ಮಾಡುವ ಸಮರ್ಥ ಅಧಿಕಾರಿ ಎಂದು ಸರ್ಕಾರಕ್ಕೆ ತಿಳಿದಿತ್ತು. ಇದೇ ಕಾರಣಕ್ಕೆ 2016ರಲ್ಲಿ ಅವರಿಗೆ ಇಬ್ಬರು ಹಿರಿಯ ಅಧಿಕಾರಿಗಳಿಗಿಂತ ಆದ್ಯತೆ ನೀಡಿ ಸೇನಾ ಮುಖ್ಯಸ್ಥರನ್ನಾಗಿ ಮಾಡಲಾಗಿತ್ತು.ಜೂನ್ 2015 ರಲ್ಲಿ ಮಣಿಪುರದಲ್ಲಿ ನಮ್ಮ ಸೇನೆಯ ಮೇಲೆ ಉಗ್ರರ ದಾಳಿ ನಡೆಸಿದಾಗ 18 ಸೈನಿಕರು ಹುತಾತ್ಮರಾಗಿದ್ದರು. ಆ ಅವಧಿಯಲ್ಲಿ ಬಿಪಿನ್ ರಾವತ್ ಅವರು 21 ಪ್ಯಾರಾ ಥರ್ಡ್ ಕಾರ್ಪ್ಸ್‌ನ ಕಮಾಂಡರ್ ಆಗಿದ್ದರು. ಭಾರತವನ್ನ ಕೆಣಕಿದರೆ ಏನಾಗುತ್ತದೆ ಎಂದು ಜಗತ್ತಿಗೆ ತೋರಿಸಿಕೊಟ್ಟಿದ್ದರು. ಪ್ಯಾರಾ ಕಮಾಂಡೋಗಳು ಭಾರತದ ಗಡಿ ದಾಟಿ ಮ್ಯಾನ್ಮಾರ್ ಳಗೆ ನುಗ್ಗಿ ಕಾರ್ಯಾಚರಣೆ ನಡಸಿದ್ದರು. ಎನ್‌ಎಸ್‌ಸಿಎನ್ ಗುಂಪಿನ 60 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಅವರ ಗುಹೆ ಹೊಕ್ಕಿ ಹೊಡೆದುರುಳಿಸಿದ್ದರು.
ಪಾಕಿಸ್ತಾನದ ಉಪಟಳಗಳಿಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದರು. 29 ಸೆಪ್ಟೆಂಬರ್ 2016 ರಂದು, ಭಾರತೀಯ ಸೇನೆಯು ಪಾಕ್ ಮೇಲೆ ಸರ್ಜಿಕಲ್ ದಾಳಿ ಕೈಗೊಂಡಿತ್ತು. ಇದರಲ್ಲಿ ಅನೇಕ ಭಯೋತ್ಪಾದಕರ ಜೊತೆಗೆ ಪಾಕಿಸ್ತಾನಿ ಸೈನಿಕರೂ ಹತರಾಗಿದ್ದಾರೆ. ಇದು ನಮ್ಮ ಉರಿ ಮತ್ತು ಸಿಆರ್‌ಪಿಎಫ್ ಶಿಬಿರಗಳ ಮೇಲಿನ ದಾಳಿಗೆ ಪ್ರತಿಕಾರವಾಗಿತ್ತು.
ವರದಿ: ಆಂಟೋನಿ ಬೇಗೂರು
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700